
ನವದೆಹಲಿ: ಪಿಎಫ್ ಫಲಾನುಭವಿಗಳಿಗೆ ಇಲ್ಲೊಂದು ಸಿಹಿ ಸುದ್ದಿ ಇದ್ದು, 60 ರ ಬಳಿಕ ಕಾರ್ಮಿಕ ಭವಿಷ್ಯ ನಿಧಿ ಹಣವನ್ನು ಹಿಂಪಡೆದರೆ ಹೆತ್ತುವರಿ ಬಡ್ಡಿ ಹಣವನ್ನು ಪಡೆಯಬಹುದು ಎಂದು ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆ ತಿಳಿಸಿದೆ.
ಈ ನೂತನ ಯೋಜನೆ ಅನ್ವಯ ಕಾರ್ಮಿಕರು 58ನೇ ವಯಸ್ಸಿನಲ್ಲಿ ಉದ್ಯೋಗದಿಂದ ನಿವೃತ್ತಿ ಹೊಂದಿದ್ದರೂ ಪಿಎಫ್ ಹಣವನ್ನು 60 ವರ್ಷದ ಬಳಿಕ ಹಿಂಪಡೆದರೆ ಖಾತೆದಾರರಿಗೆ ಹೆಚ್ಚುವರಿ ಬಡ್ಡಿಯ ಸೌಲಭ್ಯ ನೀಡುವುದಾಗಿ ಕಾರ್ಮಿಕ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ ಒ) ಘೋಷಿಸಿದೆ. 58 ವರ್ಷದ ಬದಲಾಗಿ 60 ವರ್ಷಗಳಾದ ಮೇಲೆ ಪಿಎಫ್ ಹಣ ಪಡೆದರೆ ಇದಕ್ಕೆ ಹೆಚ್ಚುವರಿಯಾಗಿ ಶೇ.8.16 ಬಡ್ಡಿ ದೊರೆಯಲಿದೆ.
ಈ ಯೋಜನೆಯಿಂದ 40 ಲಕ್ಷ ಖಾತೆದಾರರಿಗೆ ಅನುಕೂಲವಾಗಲಿದ್ದು, ಜತೆಗೆ ಪಿಎಫ್ ಹಣದ ಕೊರತೆ ನಿವಾರಣೆಗೆ ಸಹಾಯಕವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. 58 ವರ್ಷದ ಬಳಿಕ ಪಿಎಫ್ ಹಣವನ್ನು ಹಿಂಪಡೆದುಕೊಳ್ಳದಿದ್ದರೆ ಪ್ರತೀ ವರ್ಷಕ್ಕೆ ಹೆಚ್ಚುವರಿಯಾಗಿ ಶೇ.4 ಬಡ್ಡಿ ನೀಡುವ ವಿಚಾರವನ್ನು ಇಪಿಎಫ್ ಒ ಘೋಷಿಸಿತ್ತು. ಆದರೆ ಇದು ಎರಡು ವರ್ಷಗಳಿಗಷ್ಟೇ ಸೀಮಿತವಾಗಿದ್ದು, ಖಾತೆದಾರ ಅದಕ್ಕಿಂತ ಹೆಚ್ಚಿನ ಕಾಲ ಹಣವಿಟ್ಟರೆ ಲಾಭ ದೊರೆಯುವುದಿಲ್ಲ. 59 ವರ್ಷದಲ್ಲಿ ಪಿಎಫ್ ಹಣ ಪಡೆದುಕೊಂಡರೆ ಹೆಚ್ಚುವರಿ ಶೇ.4 ಬಡ್ಡಿ ದೊರೆಯಲಿದೆ.
ಏಪ್ರಿಲ್ 25ರಿಂದಲೇ ಇದು ಜಾರಿಗೆ ಬಂದಿದ್ದು, ಇಪಿಎಫ್ ಒದಿಂದ ಪಿಂಚಣಿ ಪಡೆಯುತ್ತಿರುವವರಿಗೆ ಇದು ಅನ್ವಯವಾಗುವುದಿಲ್ಲ. ಜತೆಗೆ 58 ವರ್ಷಕ್ಕೆ 10 ವರ್ಷ ಸೇವೆ ಪೂರ್ಣಗೊಳಿಸಿರುವವರಿಗೆ ಮಾತ್ರ ಇದು ಅನ್ವಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
Advertisement