

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮದ ಪ್ಯಾಂಪೋರ್ ನಲ್ಲಿರುವ ಸಿಆರ್ ಪಿಎಫ್ ಮೀಸಲು ಪಡೆ ಮೇಲೆ ಉಗ್ರರು ದಾಳಿ ನಡೆಸಿರುವ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಘಟನೆಯಿಂದ ರಾಜ್ಯಕ್ಕೆ ಅವಮಾನ ಉಂಟಾಗಿರುವುದಷ್ಟೇ ಅಲ್ಲದೆ ಪವಿತ್ರ ರಂಜಾನ್ ಆಚರಣೆ ನಡೆಯುತ್ತಿರುವ ತಿಂಗಳಲ್ಲಿ ಸಿಆರ್ ಪಿಎಫ್ ಯೋಧರ ಹತ್ಯೆ ನಡೆದಿರುವುದರಿಂದಇಸ್ಲಾಮ್ ಧರ್ಮಕ್ಕೂ ಚ್ಯುತಿ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುತಾತ್ಮರಾಗಿರುವ ಸಿಆರ್ ಪಿ ಎಫ್ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೆಹಬೂಬಾ ಮುಫ್ತಿ, ಸಿಆರ್ ಪಿಎಎಫ್ ಯೋಧರ ಹತ್ಯೆಯನ್ನು ಖಂಡಿಸಿದ್ದಾರೆ. ಧರ್ಮನಿಷ್ಠೆ ಹಾಗೂ ತಪಸ್ಸನ್ನು ಆಚರಿಸುವ ರಂಜಾನ್ ವ್ರತಾಚರಣೆ ತಿಂಗಳಲ್ಲೇ ಇಂತಹ ದುರ್ಘಟನೆ ನಡೆದಿರುವುದು ತಲೆತಗ್ಗಿಸುವಂತಾಗಿದೆ ಎಂದು ಮೆಹಬೂಬಾ ಮುಫ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಂಜಾನ್ ಆಚರಣೆ ತಿಂಗಳಲ್ಲಿ ಇಂತಹ ದುಷ್ಕೃತ್ಯಗಳಲ್ಲಿ ತೊಡಗದಂತೆ ಅಲ್ಲಾನ ಆದೇಶವಿದೆ, ಆದರೆ ಇಂತಹ ಘಟನೆಗಳು ನಡೆಯುತ್ತಿರುವುದು ಕಾಶ್ಮೀರಕ್ಕೆ ಶೋಭೆ ತರುವುದಿಲ್ಲ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಯೋಧರು ಶೂಟಿ೦ಗ್ ತರಬೇತಿ ಮುಗಿಸಿ ಶ್ರೀನಗರದ ಶಿಬಿರಕ್ಕೆ ಹಿ೦ದಿರುಗುತ್ತಿದ್ದಾಗ ಯೋಧರ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ 8 ಯೋಧರು ಹುತಾತ್ಮರಾಗಿದ್ದರು.