

ನವದೆಹಲಿ: ಮಾಜಿ ಪ್ರಧಾನಿ ಇಂದಿರಾಗಾಂಧಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಜೂ.25 ಕ್ಕೆ 41 ವರ್ಷ ಕಳೆದಿರುವ ಹಿನ್ನೆಲೆಯಲ್ಲಿ, ತುರ್ತು ಪರಿಸ್ಥಿತಿಯ ದಿನಗಳನ್ನು ನೆನೆದಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ಸ್ವಾತಂತ್ರ್ಯದ ನಂತರದ ಕಾಂಗ್ರೆಸ್ ಪಕ್ಷದ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ, ಎರಡು ದಶಕಗಳ ಕಾಲ ಆರ್ಥಿಕ ಸುಧಾರಣೆಗಳನ್ನು ತಡೆಹಿಡಿದಿದ್ದು, ಭಾರತದ ಪ್ರಜಾಪ್ರಭುತ್ವವನ್ನು ವಂಶಾಡಳಿತವನ್ನಾಗಿ ಮಾಡಿದ್ದು, 1975 ರಲ್ಲಿ ತುರ್ತುಪರಿಸ್ಥಿತಿ ಹೇರಿದ್ದು, ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಇಂತಹ ಅನೇಕ ಕಪ್ಪು ಚುಕ್ಕೆಗಳು ಕಾಣುತ್ತವೆ ಎಂದು ಅರುಣ್ ಜೇಟ್ಲಿ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ದೇಶದ ಮೇಲೆ ಸರ್ವಾಧಿಕಾರಿ ಧೋರಣೆಯನ್ನು ಹೇರಲು ತುರ್ತು ಪರಿಸ್ಥಿತಿಯನ್ನು ಹೇರಿದ್ದ ಹಿಂದಿನ ಉದ್ದೇಶವಾಗಿತ್ತು, ಸಂಜಯ್ ಗಾಂಧಿಯನ್ನು ತಮ್ಮ ನಂತರದ ಉತ್ತರಾಧಿಕಾರಿಯೆನೆಂದು ಬಿಂಬಿಸುವ ಮೂಲಕ ಇಂದಿರಾ ಗಾಂಧಿ ಪ್ರಜಾಪ್ರಭುತ್ವವಾಗಿದ್ದ ಭಾರತವನ್ನು ವಂಶಾಡಳಿತವನ್ನಾಗಿಸಿದ್ದರು, ಅಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದ ಆಂತರಿಕ ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸಲಾಗಿತ್ತು ಎಂದು ಜೇಟ್ಲಿ ಆರೋಪಿಸಿದ್ದಾರೆ.