

ಚಂಡೀಗಢ: ಸುಲ್ತಾನ್ ಚಿತ್ರದ ಚಿತ್ರೀಕರಣದ ವೇಳೆ ತಾವು ಅನುಭವಿಸಿದ್ದ ಪಾಡನ್ನು ಅತ್ಯಾಚಾರ ಸಂತ್ರಸ್ತರಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಕುಸ್ತಿ ಪಟುವಾಗಿ ನಟಿಸಿದ್ದ ಸಮಯದಲ್ಲಿ ತಾವು ಅನುಭವಿಸಿದ್ದ ಪಾಡನ್ನು ಅತ್ಯಾಚಾರಕ್ಕೆ ಗುರಿಯಾದ ಮಹಿಳೆಯ ದಯನೀಯ ಸ್ಥಿತಿಗೆ ಹೋಲಿಕೆ ಮಾಡಿದ್ದನ್ನು ವಿರೋಧಿಸಿ ಹರ್ಯಾಣದ ಅತ್ಯಾಚಾರ ಸಂತ್ರಸ್ತೆಯೊಬ್ಬರು ಸಲ್ಮಾನ್ ಖಾನ್ ಗೆ 10 ಕೋಟಿ ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.
ಸಲ್ಮಾನ್ ಖಾನ್ ಅವರ ಮುಂಬೈನ ನಿವಾಸದ ವಿಳಾಸಕ್ಕೆ ಅತ್ಯಾಚಾರ ಸಂತ್ರಸ್ತೆ ನೋಟಿಸ್ ಕಲಿಸಿದ್ದು, ಸಲ್ಮಾನ್ ಖಾನ್ ಹೇಳಿಕೆಯಿಂದ ತಮ್ಮ ಮನಸ್ಸಿಗೆ ಘಾಸಿಯಾಗಿದ್ದು 10 ಕೋಟಿ ಪರಿಹಾರ ನೀಡಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಎಂದು ನೋಟಿಸ್ ನಲ್ಲಿ ಆಗ್ರಹಿಸಿದ್ದಾರೆ. ಸಲ್ಮಾನ್ ಖಾನ್ ಗೆ ನೋಟಿಸ್ ಕಳಿಸಿರುವ ಮಹಿಳೆ ಮೇಲೆ ನಾಲ್ಕು ವರ್ಷದ ಹಿಂದೆ ಗ್ಯಾಂಗ್ ರೇಪ್ ನಡೆದಿತ್ತು.
ಮಹಿಳೆಯ ಪರವಾಗಿ ನೋಟಿಸ್ ಕಳಿಸಿರುವ ಆಕೆಯ ಪರ ವಕೀಲರು, " ಅತ್ಯಾಚಾರ ಸಂತ್ರಸ್ತರ ಕುರಿತು ನಿಮ್ಮ ಹೇಳಿಕೆಯಿಂದ ನನ್ನ ಕಕ್ಷಿದಾರರ ಮನಸ್ಸಿಗೆ ತೀವ್ರತರವಾದ ನೋವುಂಟಾಗಿದೆ, ಪರಿಣಾಮ ಈಗ ಆಕೆ ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದು, 10 ಕೋಟಿ ರು ಪರಿಹಾರ ನೀಡಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ನೋಟಿಸ್ ನಲ್ಲಿ ಬೇಡಿಕೆ ಇಡಲಾಗಿದೆ.