
ನವದೆಹಲಿ: 8 ಯೋಧರ ಧಾರುಣ ಸಾವಿಗೆ ಕಾರಣವಾದ ಪ್ಯಾಂಪೋರ್ ದಾಳಿ ಮಾದರಿಯಲ್ಲೇ ಲಷ್ಕರ್ ಉಗ್ರ ಸಂಘಟನೆ ಫಿದಾಯೀನ್ ಉಗ್ರ ದಾಳಿಗೆ ಸಿದ್ಧತೆ ನಡೆಸುತ್ತಿದ್ದು, ಇದಕ್ಕಾಗಿ ಸ್ಥಳೀಯ ಉಗ್ರ ಸಂಘಟನೆಯಾದ ಮಜಿದ್ ಝರ್ಗರ್ ನೊಂದಿಗೆ ಕೈಜೋಡಿಸಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಮೂಲಗಳ ಪ್ರಕಾರ ಭಾರತೀಯ ಯೋಧರು ಮತ್ತು ಯೋಧರ ಕ್ಯಾಂಪ್ ಗಳೇ ಉಗ್ರರ ಪ್ರಮುಖ ಗುರಿಯಾಗಿದ್ದು, ಸೇನಾ ಕ್ಯಾಂಪ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಇನ್ನೇ ಕೇಂದ್ರ ಗುಪ್ತಚರ ಅಧಿಕಾರಿಗಳು ಇಂತಹ ಎಚ್ಚರಿಕೆ ನೀಡಿದ ಬೆನ್ನಲ್ಲೇ ಗೃಹ ಇಲಾಖೆ ತೀವ್ರ ಕಟ್ಟೆಚ್ಚರದಿಂದ ಇರುವಂತೆ ಕಾಶ್ಮೀರದ ಗೃಹಇಲಾಖೆಗೆ ಸೂಚಿಸಿದೆ. ಅಲ್ಲದೆ ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತು ಅನುಮಾನಾಸ್ಪದ ಪ್ರದೇಶಗಳಲ್ಲಿ ಶೋಧ ನಡೆಸುವಂತೆ ಸೂಚನೆ ನೀಡಿದೆ.
ದೆಹಲಿ ಮತ್ತು ಕಾಶ್ಮೀರ ಸಿಆರ್ ಪಿಎಫ್ ಸೇನಾ ನೆಲೆಗಳಲ್ಲಿ ಕಚ್ಚೆಚ್ಚರ
ಅತ್ತ ಕೇಂದ್ರ ಗೃಹಇಲಾಖೆ ಸಂಭಾವ್ಯ ದಾಳಿ ಕುರಿತಂತೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ರಾಜಧಾನಿ ದೆಹಲಿ ಮತ್ತು ಕಾಶ್ಮೀರ ಕಣಿವೆಯಲ್ಲಿನ ವಿವಿಧ ಸೇನಾ ನೆಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಶ್ರೀನಗರದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೇನೆಯ ಸೈನಿಕರು ವೀಕ್ಷಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ಯಾಂಪೋರ್ ದಾಳಿಯಲ್ಲಿ ಸ್ಥಳೀಯನ ಕೈವಾಡ
ಇನ್ನು ಪ್ಯಾಂಪೋರ್ ಉಗ್ರ ದಾಳಿಯಲ್ಲಿ ಸ್ಥಳೀಯ ವ್ಯಕ್ತಿಯ ಕೈವಾಡದ ಕುರಿತು ಸೇನೆ ಅನುಮಾನ ವ್ಯಕ್ತಪಡಿಸಿದ್ದು, ದಕ್ಷಿಣ ಕಾಶ್ಮೀರದ ಖಾಜಿಗುಂಡ್ ಜಿಲ್ಲೆಯ ವಿಸ್ಸು ಎಂಬ ಗ್ರಾಮದ ನಿವಾಸಿ ರುಹುಲ್ ಅಮೀನ್ ದಾರ್ ಎಂಬತಾ ಕೈವಾಡವಿರಬಹುದು ಎಂದು ಸೇನಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈತ ಲಷ್ಕರ್ ಉಗ್ರ ಸಂಘಟನೆ ಸ್ಥಳೀಯ ಕಮಾಂಡರ್ ಆಗಿದ್ದು, ಪ್ಯಾಂಪೋರ್ ದಾಳಿ ಬಳಿಕ ಭೂಗತನಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.
Advertisement