ಉತ್ತರ ಪ್ರದೇಶ: ಅರ್ಥಶಾಸ್ತ್ರದ ಪ್ರೊಫೆಸರ್ ಗೆ ಆಡಿಟ್, ಐಎಂಎಫ್ ಎಂದರೇನು ಗೊತ್ತಿಲ್ಲ!

ಉತ್ತರ ಪ್ರದೇಶದ ಕಥೆ ಕೇಳಿದರೆ ನಿಜಕ್ಕೂ ಶಿಕ್ಷಣ ಪರಿಸ್ಥಿತಿ ಬಗ್ಗೆ ಭಯ ಉಂಟಾಗುತ್ತದೆ.
ಉತ್ತರ ಪ್ರದೇಶ
ಉತ್ತರ ಪ್ರದೇಶ

ಲಖನೌ: ರಾಜ್ಯಶಾಸ್ತ್ರದಲ್ಲಿ ಅಡುಗೆ ಹೇಳಿಕೊಡ್ತಾರೆ ಎಂದು ಬಿಹಾರದ ಪಿಯು ಟಾಪರ್ ವಿದ್ಯಾರ್ಥಿನಿ ಹೇಳಿದ್ದನ್ನು ಕೇಳಿ, ಅಲ್ಲಿನ ಶಿಕ್ಷಣದ ಪರಿಸ್ಥಿತಿಯ ಬಗ್ಗೆ ನಾವೆಲ್ಲಾ ದಂಗಾಗಿದ್ದೆವು. ಆದರೆ ವಿದ್ಯಾರ್ಥಿಗಳಾದ ಕಾರಣ ಬಿಹಾರದ ಪಿಯು ನಕಲಿ ಟಾಪರ್ ಗಳಿಗೆ ಕಲಿಯುವ ಅವಕಾಶ ಇನ್ನು ಇದೆ ಎಂದು ಸಮಾಧಾನ ಪಟ್ಟುಕೊಂಡಿದ್ದಾಗಿತ್ತು.

ಆದರೆ ಉತ್ತರ ಪ್ರದೇಶದ ಕಥೆ ಕೇಳಿದರೆ ನಿಜಕ್ಕೂ ಶಿಕ್ಷಣ ಪರಿಸ್ಥಿತಿ ಬಗ್ಗೆ ಭಯ ಉಂಟಾಗುತ್ತದೆ. ಏಕೆಂದರೆ ಇಲ್ಲಿ ತಪ್ಪು ಮಾಡಿರುವುದು ವಿದ್ಯಾರ್ಥಿಗಳಲ್ಲಲ್ಲ ವಿದ್ಯಾರ್ಥಿಗಳಿಗೆ ಬೋಧಿಸಬೇಕಾದ ಪ್ರಾಧ್ಯಾಪಕರು. ಉತ್ತರ ಪ್ರದೇಶದ ಇಂಗ್ಲೀಷ್ ಭಾಷೆಯ ಸಹಾಯಕ ಪ್ರಾಧ್ಯಾಪಕರಾಗಿರುವವರಿಗೆ ಮೌಲ್ಯಮಾಪನ (ಇವ್ಯಾಲ್ಯುಯೇಷನ್) ಎಂಬುದರ ಸ್ಪೆಲಿಂಗ್ ಗೊತ್ತಿಲ್ಲ.

ಅರ್ಥಶಾಸ್ತ್ರದ ಪ್ರಾಧ್ಯಾಪಕರ ಸ್ಥಿತಿಯಂತೂ ಇನ್ನು ಘನಘೋರವಾದದ್ದು. ಕಾರಣ ಅವರಿಗೆ ಆಡಿಟ್, ಐಎಂಎಫ್ ಗಳು ಎಂದರೇನು ಎಂಬುದೇ ಗೊತ್ತಿಲ್ಲ!. ಇನ್ಸ್ಟಿಟ್ಯೂಟ್ ಆಫ್ ಟೂರಿಸಂ ಹಾಗೂ ಹೋಟೆಲ್ ಮ್ಯಾನೇಜ್ಮೆಂಟ್( ಐಟಿಹೆಚ್ಎಂ) ನಲ್ಲಿ ಬಿಎ ಇಂಗ್ಲೀಷ್ ಹಾಗೂ ಎಕನಾಮಿಕ್ಸ್‌ ನ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ನಡೆಸಬೇಕಾದರೆ ಇಬ್ಬರು ಪ್ರೊಫೆಸರ್ ಗಳ ಬುದ್ಧಿಮಟ್ಟ ಬೆಳಕಿಗೆ ಬಂದಿದೆ.ಮೌಲ್ಯಮಾಪನ ಕೇಂದ್ರದ ಸಂಯೋಜಕರು ಪ್ರೊಫೆಸರ್ ಗಳ ಬಗ್ಗೆ ಅನುಮಾನಗೊಂಡ ಪರಿಣಾಮ ಪ್ರೊಫೆಸರ್ ಗಳ ಅಜ್ಞಾನ ಬೆಳಕಿಗೆ ಬಂದಿದ್ದು, ಉತ್ತರ ಪ್ರದೇಶದ ಶೈಕ್ಷಣಿಕ ಪರಿಸ್ಥಿತಿ ಶೋಚನೀಯವಾಗಿರುವುದು ಬಹಿರಂಗವಾಗಿದೆ.

ಮಹಾತ್ಮಾ ಜ್ಯೋತಿಬಾಫುಲೆ ರೋಹಿಲ್ಖಂಡ್ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಸಹಾಯಕ ಪ್ರೊಫೆಸರ್ ಶ್ಯಾಮ್ ಬಹದ್ದೂರ್ ಹಾಗೂ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ ವಿವಿಯ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಅನಿಲ್ ಕುಮಾರ್ ಪಾಲ್ ಕಳೆದ ಒಂದು ದಶಕದಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ ಆದರೂ ಸಹ ಒಬ್ಬರಿಗೆ ಇವ್ಯಾಲ್ಯುಯೇಷನ್ ಎಂಬುದನ್ನು ಸರಿಯಾಗಿ ಬರೆಯಲು ತಿಳಿದಿಲ್ಲ. ಮತ್ತೊಮ್ಮ ಪ್ರೊಫೆಸರ್ ಗೆ ಆಡಿಟ್, ಐಎಎಂ ಎಫ್ ಎಂದರೇನು ಅಂತ ತಿಳಿದಿಲ್ಲ.

ಇಬ್ಬರು ಪ್ರಾಧ್ಯಾಪಕರ ವಿಷಯ ಉತ್ತರ ಪ್ರದೇಶ ರಾಜ್ಯಪಾಲ, ವಿಶ್ವವಿದ್ಯಾನಿಲಯದ ಕುಲಪತಿಗಳೂ ಆಗಿರುವ ರಾಮ್ ನಾಯ್ಕ್ ಅವರ ಗಮನಕ್ಕೆ ಬಂದಿದ್ದು, ಪ್ರಾಧ್ಯಾಪಕರ ವಿವರವನ್ನು ಪಡೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇಂಗ್ಲೀಷ್ ಪ್ರಾಧ್ಯಾಪಕ ಶ್ಯಾಮ್ ಬಹದ್ದೂರ್ ಇವ್ಯಾಲ್ಯುಯೇಷನ್ ಸ್ಪೆಲಿಂಗ್ ನ್ನು ತಪ್ಪಾಗಿ ಬರೆದಿದ್ದರೆ ಮತ್ತೋರ್ವ ಪ್ರಾಧ್ಯಾಪಕರಿಗೆ ಆಡಿಟ್, ಐಎಂಎಫ್ ಎಂದರೇನು ಎಂದು ಕೇಳಿದ್ದಕ್ಕೆ ಉತ್ತರಿಸಲು ಸಾಧ್ಯವಾಗಲಿಲ್ಲ ಎಂದು ಐಟಿಹೆಚ್ಎಂ ಮೌಲ್ಯಮಾಪನ ಕೇಂದ್ರದ ಸಂಯೋಜಕ ಲವಕುಶ್ ಮಿಶ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಒಂದೆಡೆ ಭಾರತವನ್ನು ವಿಶ್ವಗುರು, ವಿದ್ಯೆಯ ವಿಷಯದಲ್ಲಿ ಜಗತ್ತಿನ ಶ್ರೇಷ್ಠ ರಾಷ್ಟ್ರಗಳಲ್ಲಿ ಒಂದು ಎಂದೆಲ್ಲಾ ಬಣ್ಣಿಸಲಾಗುತ್ತಿದ್ದರೆ, ಉತ್ತರ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುವ ಗುರುಗಳ ಸ್ಥಿತಿಯೇ ಶೋಚನೀಯವಾದಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com