

ಮಥುರಾ: ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ದೇವರು ನೀಡಿರುವ ಉಡುಗೊರೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಬಿಜೆಪಿ ಯುವಮೋರ್ಚಾದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ್ದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೆ ಎನ್ ಯು ವಿವಿ ವಿವಾದದಲ್ಲಿ ರಾಹುಲ್ ಗಾಂಧಿ ನಿಲುವಿನಿಂದ ಮಹಾತ್ಮಾ ಗಾಂಧಿ ಅವರ ಪಕ್ಷ ಮುಜುಗರ ಪಟ್ಟುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿದ ನಾಯಕನಾಗಿದ್ದು ಭಾರತವನ್ನು ಬಲಿಷ್ಥಗೊಳಿಸಲು ಶ್ರಮಿಸುತ್ತಿದ್ದಾರೆ ಎಂದು ಶಿವರಾಜ್ ಸಿಂಗ್ ಹೇಳಿದ್ದಾರೆ. ಮೋದಿ ಉನ್ನತ ವಿಚಾರಗಳನ್ನು ಹೊಂದಿರುವ ಹಾಗೂ ಅವುಗಳನ್ನು ಈಡೇರಿಸುವ ಇಚ್ಛಾಶಕ್ತಿ ಹೊಂದಿರುವ ವ್ಯಕ್ತಿ, ಅವರು ದೇವರು ಭಾರತಕ್ಕಾಗಿ ನೀಡಿರುವ ಉಡುಗೊರೆ, 2020 ರ ವೇಳೆಗೆ ಪ್ರಧಾನಿ ಮೋದಿ ಭಾರತವನ್ನು ವಿಶ್ವಗುರುವನ್ನಾಗಿ ಮಾಡಲಿದ್ದಾರೆ ಎಂದು ಶಿವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.