ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರ ಹತ್ಯೆಗೆ 11 ಲಕ್ಷ ರುಪಾಯಿ ಬಹುಮಾನ ಘೋಷಿಸಿ ಭಿತ್ತಿಪತ್ರ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವಾಂಚಲ ಸೇನಾ ಮುಖ್ಯಸ್ಥ ಆದರ್ಶ ಶರ್ಮಾ ಅವರನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಭಿತ್ತಿ ಪತ್ರ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ಮಾ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.
ಕಳೆದ ಶನಿವಾರ ಕನ್ಹಯ್ಯ ಕುಮಾರ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದರೆ 11 ಲಕ್ಷ ರುಪಾಯಿ ಬಹುಮಾನ ನೀಡಲಾಗುವುದು ಎಂಬ ಸಂದೇಶ ಒಳಗೊಂಡ ಭಿತ್ತಿಪತ್ರಗಳು ನಗರದ ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಬಸ್ ನಿಲ್ದಾಣ ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ಪತ್ತೆಯಾಗಿದ್ದವು.
ಈ ಭಿತ್ತಿಪತ್ರದಲ್ಲಿ ಅದರ್ಶ ಶರ್ಮಾ ಅವರ ಹೆಸರು ಹಾಗೂ ಮೊಬೈಲ್ ನಂಬರ್ ನ್ನು ನೀಡಲಾಗಿತ್ತು.