ನಾಶಿಕ್: ಮಹಿಳೆಯರಿಗೆ ನಿಷೇಧವಿರುವ ನಾಶಿಕ್ ನ ತ್ರಯಂಬಕೇಶ್ವರ ಶಿವ ದೇವಾಲಯ ಪ್ರವೇಶಿಸಲು ಮುಂದಾಗಿದ್ದ ಭೂಮಾತಾ ಬ್ರಿಗೇಡ್ ನ ಮುಖ್ಯಸ್ಥೆ ತೃಪ್ತಿ ದೇಸಾಯಿ ಸೇರಿದಂತೆ ಅವರ ಬೆಂಬಲಿಗರನ್ನು ಮಹಾರಾಷ್ಟ್ರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಇಲ್ಲಿಯವರೆಗೂ ತ್ರಯಂಬಕೇಶ್ವರ ದೇವಾಲಯದ ಗರ್ಭಗುಡಿಗೆ ಪುರುಷರಿಗೆ ಮಾತ್ರ ಪ್ರವೇಶವಿದ್ದು, ಇದನ್ನು ತೀವ್ರವಾಗಿ ವಿರೋಧಿಸಿದ್ದ ತೃಪ್ತಿ ದೇಸಾಯಿ ಹಾಗೂ ಆಕೆಯ ಬೆಂಬಲಿಗರು ನಿಷೇಧವನ್ನು ಉಲ್ಲಂಘಿಸಿ ದೇವಾಲಯ ಪ್ರವೇಶಕ್ಕೆ ಮುಂದಾಗಿದ್ದರು.
ಮಹಾಶಿವರಾತ್ರಿಯಂದು ಗರ್ಭಗುಡಿ ಪ್ರವೇಶಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ತೃಪ್ತಿ ದೇಸಾಯಿ ಹಾಗೂ ಬೆಂಬಲಿಗರನ್ನು ದೇವಾಲಯದಿಂದ 90 ಕಿ.ಮೀ ದೂರದಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೇಶದಾದ್ಯಂತ ಭಕ್ತಾದಿಗಳು ಸೋಮವಾರ ಮಹಾ ಶಿವರಾತ್ರಿ ಆಚರಿಸುತ್ತಿದ್ದಾರೆ. ೧೨ ಜ್ಯೋತಿರ್ಲಿಂಗಗಳನ್ನು ಒಳಗೊಂಡ ತ್ರಯಂಬಕೇಶ್ವರ ಪ್ರಮುಖ ಶಿವ ದೇವಾಲಯಗಳಲ್ಲಿ ಒಂದು.