
ನವದೆಹಲಿ: ಮಹಾರಾಷ್ಟ್ರದಲ್ಲಿರುವ ಶನಿ ಶಿಂಗಣಾಪುರ ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸುವುದಕ್ಕೆ ಮಹಿಳೆಯರಿಗೆ ಅವಕಾಶ ನೀಡಬೇಕೆಂದು ಆಂದೋಲನ ನಡೆಸಿದ್ದು ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರ ಪ್ರವೇಶ ವಿವಾದ ಮತ್ತೆ ಕೇಳಿಬರುತ್ತದೆ.
ಮಹಾ ಶಿವರಾತ್ರಿಯ ಪರ್ವ ದಿನದಂದು ನಾಶಿಕ್‌ನ ತ್ರ್ಯಂಬಕೇಶ್ವರ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸುವುದಕ್ಕೆ ಭೂಮಾತಾ ಬ್ರಿಗೇಡ್‌ನ ಮಹಿಳಾ ಆಂದೋಲನಕಾರರು ತೃಪ್ತಿ ದೇಸಾಯಿ ಕಾರ್ಯಕರ್ತೆಯ ನೇತೃತ್ವದಲ್ಲಿ ಪಾದಯಾತ್ರೆ ಹೊರಟಿದ್ದಾರೆ.
ನಾಶಿಕ್‌ನಿಂದ 30 ಕಿಲೋ ಮೀಟರ್ ದೂರದಲ್ಲಿರುವ ತ್ರ್ಯಂಬಕೇಶ್ವರ ದೇವಸ್ಥಾನ 12 ಜ್ಯೋತಿರ್ಲಿಂಗಗಳಲ್ಲಿ ಒಂದು. ಇಲ್ಲಿನ ಗರ್ಭಗುಡಿಯನ್ನು ಧಾರ್ಮಿಕ ಪರಂಪರೆ ಮತ್ತು ಕಟ್ಟುಕಟ್ಟಳೆಯ ಪ್ರಕಾರ ಬಹಳ ಹಿಂದಿನಿಂದಲೂ ಮಹಿಳೆಯರು ಪ್ರವೇಶಿಸುವಂತಿಲ್ಲ. ಇದೀಗ ಮಹಾ ಶಿವರಾತ್ರಿಯ ಪರ್ವ ದಿನದಂದು ತ್ರ್ಯಂಬಕೇಶ್ವರ ದೇವಳದ ಗರ್ಭಗುಡಿ ಪ್ರವೇಶಿಸುವ ಸಂಕಲ್ಪವನ್ನು ಮಹಿಳೆಯರು ತಳೆದಿದ್ದಾರೆ. ಅದಕ್ಕಾಗಿ ಸುಮಾರು 150ರಿಂದ 200 ಮಂದಿ ಭೂಮಾತಾ ಬ್ರಿಗೇಡ್‌ನ ಆಂದೋಲನಕಾರರು ತ್ರ್ಯಂಬಕೇಶ್ವರ ದೇಗಲಕ್ಕೆ ಪಾದಯಾತ್ರೆ ಹೊರಟಿದ್ದಾರೆ.
"ನಾವಿಂದು ಮಹಾ ಶಿವರಾತ್ರಿಯ ಪರ್ವ ದಿನದಂದು ನಾಶಿಕ್‌ನ ತ್ರ್ಯಂಬಕೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡು ಅಲ್ಲಿ ದೇವಳದ ಗರ್ಭಗುಡಿಯನ್ನು ಖಂಡಿತಾ ಪ್ರವೇಶಿಸಲಿದ್ದೇವೆ, ಪೊಲೀಸರು ನಮ್ಮನ್ನು ತಡೆಯಲು ಸಾಧ್ಯವಿಲ್ಲ, ಏಕೆಂದರೆ ಸಂವಿಧಾನದಲ್ಲಿ ನಮಗೆ ಗರ್ಭಗುಡಿ ಪ್ರವೇಶಕ್ಕೆ ಅನುಮತಿ ಇದೆ ಎಂದು ತೃಪ್ತಿ ದೇಸಾಯಿ ಹೇಳಿದ್ದಾರೆ.
ಮಹಾರಾಷ್ಟ್ರದ ಶನಿ ಶಿಂಗಣಾಪುರ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಲು ಭೂಮಾತಾ ಬ್ರಿಗೇಡ್ ಕೈಗೊಂಡಿದ್ದ ಪಾದಯಾತ್ರೆಯನ್ನು ಕಳೆದ ಫೆ.10ರಂದು ಪೊಲೀಸರು ತಡೆದಿದ್ದರು.
Advertisement