ಪಾಕ್ ನ ಪುಟ್ಟ ಬಾಲಕಿ ಪಾಲಿಗೆ "ಭಜರಂಗಿ ಭಾಯ್ ಜಾನ್" ಆದ ಭಾರತೀಯ ಯೋಧರು

ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೊಂದು "ಭಜರಂಗಿ ಭಾಯ್ ಜಾನ್" ಚಿತ್ರವನ್ನು ನೆನಪಿಸುವ ಘಟನೆ ನಡೆದಿದ್ದು, ಅರಿವಿಲ್ಲದೇ ಗಡಿ ದಾಟಿದ್ದ ಪಾಕಿಸ್ತಾನ ಮೂಲದ 5 ವರ್ಷದ ಪುಟ್ಟ ಬಾಲಕಿಯನ್ನು ಭಾರತೀಯ ಯೋಧರು ಪಾಕಿಸ್ತಾನ ಸೈನ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ...
ಪಾಕಿಸ್ತಾನಕ್ಕೆ ಬಾಲಕಿ ಹಸ್ತಾಂತರಿಸಿದ ಯೋಧರು (ಚಿತ್ರಕೃಪೆ: ಟ್ವಿಟರ್)
ಪಾಕಿಸ್ತಾನಕ್ಕೆ ಬಾಲಕಿ ಹಸ್ತಾಂತರಿಸಿದ ಯೋಧರು (ಚಿತ್ರಕೃಪೆ: ಟ್ವಿಟರ್)

ಜಲಂಧರ್: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೊಂದು "ಭಜರಂಗಿ ಭಾಯ್ ಜಾನ್" ಚಿತ್ರವನ್ನು ನೆನಪಿಸುವ ಘಟನೆ ನಡೆದಿದ್ದು, ಅರಿವಿಲ್ಲದೇ ಗಡಿ ದಾಟಿದ್ದ ಪಾಕಿಸ್ತಾನ ಮೂಲದ 5  ವರ್ಷದ ಪುಟ್ಟ ಬಾಲಕಿಯನ್ನು ಭಾರತೀಯ ಯೋಧರು ಪಾಕಿಸ್ತಾನ ಸೈನ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಪಂಜಾಬ್‌ನ ಅಬೋಹರ್ ಭಾಗದಲ್ಲಿ ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಐದು ವರ್ಷದ ಪಾಕಿಸ್ತಾನಿ ಬಾಲಕಿಯೊಬ್ಬಳು ಭಾರತದ ಗಡಿಯೊಳಕ್ಕೆ ಪ್ರವೇಶಿಸಿದ್ದು, ಅಲ್ಲಿ ಪಹರೆ ನಡೆಸುತ್ತಿದ್ದ  ಭಾರತೀಯ ಯೋಧರಿಗೆ ಸಿಕ್ಕಿದ್ದಾಳೆ. ಈ ವೇಳೆ ಆಕೆಯನ್ನು ವಿಚಾರಿಸಿದಾಗ ಆಕೆ ಕಿವುಡ ಮತ್ತು ಮೂಕ ಬಾಲಕಿ ಎಂಬ ಅಂಶ ತಿಳಿದಿದೆ. ಹೀಗಾಗಿ ಯೋಧರು ಬಾಲಕಿಯನ್ನು ಹಿರಿಯ  ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಬಾಲಕಿಯನ್ನು ಆಕೆಯ ಪೋಷಕರೊಂದಿಗೆ ಸೇರಿಸಬೇಕು ಎನ್ನುವ ಉದ್ದೇಶದಿಂದ ಭಾರತೀಯ ಯೋಧರು ಗಡಿ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಾಲಕಿ ಕುರಿತು ಮಾಹಿತಿ ಹಂಚಿದ್ದಾರೆ.  ಅಲ್ಲದೆ ನೆರೆಯ ಪಾಕಿಸ್ತಾನ ಸೈನ್ಯಾಧಿಕಾರಿಗಳಿ ವಿಷಯ ಮುಟ್ಟಿಸಿ ಬಾಲಕಿಯ ಪೋಷಕರ ಕುರಿತು ವಿಚಾರಿಸಿದ್ದಾರೆ. ಈ ವೇಳೆ ಬಾಲಕಿ ಪಾಕಿಸ್ತಾನ ಮೂಲದವಳೆಂದು ತಿಳಿದುಬಂದಿದ್ದು,  ಆಟವಾಡುತ್ತಾ ಅರಿವಿಲ್ಲದೇ ಗಡಿ ದಾಟಿದ್ದಾಳೆ ಎಂದು ತಿಳಿದುಬಂದಿದೆ.

ಹೀಗಾಗಿ ಪಾಕಿಸ್ತಾನದ ರೇಂಜರ್ ಗಳೊಂದಿಗೆ ಭಾರತೀಯ ಸೇನಾಧಿಕಾರಿಗಳು ಸಭೆ ನಡೆಸಿ ಆಕೆಯನ್ನು ಮಾನವೀಯತೆ ದೃಷ್ಟಿಯಿಂದ ಶನಿವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ  ಆಕೆಯನ್ನು ಪಾಕ್ ಸೇನೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಒಟ್ಟಾರೆ ಭಾರತೀಯ ಯೋಧರ ಮಾನವೀಯತೆಯಿಂದಾಗಿ ಬಾಲಕಿ ಮತ್ತೆ ತನ್ನ ಪೋಷಕರ ಮಡಿಲು ಸೇರುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com