
ನವದೆಹಲಿ: ಮಾಜಿ ಕೌನ್ಸಿಲರ್ ಮನೆ ಬಳಿ ನಡೆದ ಶೂಟ್ ಔಟ್ ನಿಂದಾಗಿ ಇಬ್ಬರು ಭದ್ರತಾ ಅಧಿಕಾರಿಗಳು ಸಾವನ್ನಪ್ಪಿರುವ ಘಟನೆ ಶುಕ್ರವಾರ ತಡರಾತ್ರಿಯಲ್ಲಿ ನಡೆದಿದೆ.
ಮಾಜಿ ಕೌನ್ಸಿಲರ್ ಕೃಷ್ಣ ಪೆಹಲ್ವಾನ್ ಎಂಬುವವರ ದೆಹಲಿಯ ನಜಾಫ್ ಗಡದಲ್ಲಿರುವ ಮನೆ ಬಳಿ ಈ ದುರ್ಘಟನೆ ಸಂಭವಿಸಿದ್ದು, ಭದ್ರತಾ ಸಿಬ್ಬಂದಿ ಮತ್ತು ಯುವಕರ ಗುಂಪಿನ ನಡುವೆ ನಡೆದ ಮಾತಿನ ಚಕಮಕಿ ಬಳಿಕ ಕೋಪೋದ್ರಿಕ್ತ ಯುವಕರು ಭದ್ರತಾ ಸಿಬ್ಬಂದಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಮಾಜಿ ಕೌನ್ಸಿಲರ್ ತಮ್ಮ ಮನೆಯಲ್ಲಿ ಖಾಸಗಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿಗಳು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವಕರ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಸ್ಪರ ಕೈಕೈ ಮಿಲಾಯಿಸುವ ಹಂತ ತಲುಪಿದೆ. ಈ ವೇಳೆ ಭದ್ರತಾ ಸಿಬ್ಬಂದಿಗಳ ತೀವ್ರ ಕೋಪಗೊಂಡಿದ್ದ ಯುವಕರು ಗುಂಡು ಹಾರಿಸಿದ್ದಾರೆ. ಈ ವೇಳೆ ಇಬ್ಬರು ಭದ್ರತಾ ಸಿಬ್ಬಂದಿಗಳಿಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರಿಬ್ಬರೂ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ಗುಂಡುಹಾರಿಸಿದ ಯುವಕರ ಗುಂಪನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಮಾಜಿ ಕೌನ್ಸಿಲರ್ ಕೃಷ್ಣ ಪೆಹಲ್ವಾನ್ ಅವರ ಸಹೋದರ ಭರತ್ ಸಿಂಗ್ ಕೂಡ ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಎದುರಾಳಿಗಳ ಗುಂಡಿಗೆ ಹತರಾಗಿದ್ದರು.
Advertisement