
ನವದೆಹಲಿ: ದ್ವಿಪೌರತ್ವ ವಿವಾದ ಕುರಿತಂತೆ ಸಂಸದೀಯ ನೀತಿ ಸಮಿತಿ ಜಾರಿ ಮಾಡಿರುವ ನೋಟಿಸ್ ಕುರಿತಂತೆ ಗಮನ ಹರಿಸಲಾಗುವುದು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಸೋಮವಾರ ಹೇಳಿದ್ದಾರೆ.
ರಾಹುಲ್ ಗಾಂಧಿ ಪೌರತ್ವ ವಿಚಾರವನ್ನು ಸುಮಿತ್ರ ಮಹಾಜನ್ ಅವರು ಎಲ್.ಕೆ ಅಡ್ವಾಣಿ ನೇತೃತ್ವದ ನೈತಿಕ ಸಮಿತಿಗೆ ಶಿಫಾರಸ್ಸು ಮಾಡಿದ್ದರು. ಇದೀಗ ಈ ಸಮಿತಿ ವಿವಾದ ಕುರಿತು ಸ್ಫಷ್ಟನೆ ನೀಡುವಂತೆ ರಾಹುಗ್ ನೋಟಿಸ್ ಜಾರಿ ಮಾಡಿತ್ತು.
ತಮ್ಮ ವಿರುದ್ಧ ನೋಟಿಸ್ ಜಾರಿಯಾಗಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿಯವರು, ನೋಟಿಸ್ ಕುರಿತಂತೆ ಗಮನ ಹರಿಸಲಾಗುವುದು. ನೋಟಿಸ್ ನ್ನು ನೋಡಿಕೊಳ್ಳುತ್ತೇನೆಂದು ಹೇಳಿದ್ದಾರೆ.
ಇದರಂತೆ ನೋಟಿಸ್ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕರು, ಮಲ್ಯ ವಿಚಾರವನ್ನು ಮರೆಮಾಚುವ ಸಲುವಾಗಿ ಕೇಂದ್ರ ಇದೀಗ ಈ ವಿಚಾರವನ್ನು ಎಳೆದಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಕೇಳುವ ಪ್ರಶ್ನೆಗೆ ಉತ್ತರಿಸಲಾಗದ ಬಿಜೆಪಿ ನಾಯಕರು ಇದೀಗ ವೈಯಕ್ತಿಕ ವಿಚಾರಗಳನ್ನು ಎಳೆಯುತ್ತಿವೆ. ಆದರೆ, ಈ ಆರೋಪಗಳನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಪಿ.ಎಲ್. ಪುಣ್ಯ ಅವರು ಹೇಳಿಕೊಂಡಿದ್ದಾರೆ.
ಈ ಹಿಂದೆ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ರಾಹುಲ್ ಪೌರತ್ವ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದರು. ಪತ್ರದಲ್ಲಿ ರಾಹುಲ್ ಇಂಗ್ಲೆಂಡ್ ನಲ್ಲಿ ಕಂಪನಿಯೊಂದನ್ನು ಆರಂಭಿಸಲು ತಮ್ಮನ್ನು ಬ್ರಿಟಿಷ್ ಪ್ರಜೆಯೆಂದು ಘೋಷಿಸಿಕೊಂಡಿದ್ದಾರೆಂದು ಆರೋಪಿಸಿದ್ದರು. ಅಲ್ಲದೆ, ಭಾರತದ ಪೌರತ್ವವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದರು.
Advertisement