ಜೆಎನ್‌ಯು ವಿವಾದ: 21 ವಿದ್ಯಾರ್ಥಿಗಳಿಗೆ ಶೋಕಾಸ್ ನೋಟಿಸ್ ಜಾರಿ ಸಾಧ್ಯತೆ

ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿನ ದೇಶದ್ರೋಹ ಕಾರ್ಯಕ್ರಮದಲ್ಲಿ ವಿವಿಯ 21 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆಂಬ ವಿವಿಯ ತನಿಖಾ ಸಮಿತಿ...
ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್
ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್

ನವದೆಹಲಿ: ದೇಶಾದ್ಯಂತ ವಿವಾದಕ್ಕೆ ಕಾರಣವಾಗಿದ್ದ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿನ ದೇಶದ್ರೋಹ ಕಾರ್ಯಕ್ರಮದಲ್ಲಿ ವಿವಿಯ 21 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆಂಬ ವಿವಿಯ ತನಿಖಾ ಸಮಿತಿ ವರದಿ ಹಿನ್ನೆಲೆಯಲ್ಲಿ ಇದೀಗ 21 ವಿದ್ಯಾರ್ಥಿಗಳ ವಿರುದ್ಧ ಶೋಕಾಸ್ ನೋಟಿಸ್ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ವಿಶ್ವವಿದ್ಯಾಲಯವು ಈ ಹಿಂದೆ  ಉನ್ನತ ಮಟ್ಟದ ಆಂತರಿಕ ಸಮಿತಿಯನ್ನು ರಚಿಸಿತ್ತು. ಸಮಿತಿಯು ನಿನ್ನೆಯಷ್ಟೇ ತನ್ನ ತನಿಖೆಯ ವರದಿಯನ್ನು ವಿವಿಯ ಉಪಕುಲಪತಿ ಎಂ.ಜಗದೀಶ್ ಕುಮಾರ್ ಅವರಿಗೆ ಸಲ್ಲಿಸಿತ್ತು.

ವಿಶ್ವವಿದ್ಯಾಲಯದ ನಿಯಮಗಳಿಗೆ ವಿರುದ್ಧವಾಗಿ ನವೆಂಬರ್ 9ರಂದು ಅಫ್ಜಲ್ ಗುರು ಪರವಾಗಿ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿದ್ದು ನಿಜ ಎಂದು ತನಿಖಾ ಸಮಿತಿ ಒಮ್ಮತವಾಗಿ ಅಭಿಪ್ರಾಯಪಟ್ಟಿತ್ತು.

ತನಿಖಾ ಸಮತಿ ವರದಿಯಲ್ಲಿ ವಿದ್ಯಾರ್ಥಿಗಳ ತಪ್ಪು ಸಾಬೀತಾದ ಹಿನ್ನೆಲೆಯಲಿ ವಿವಿ ಉನ್ನತಾಧಿಕಾರಿಗಳು ನಿನ್ನೆ ಸಭೆ ನಡೆಸಿದ್ದಾರೆ. ವಿವಿಯ ನಿಯಮಗಳನ್ನು ವಿದ್ಯಾರ್ಥಿಗಳು ಉಲ್ಲಂಘನೆ ಮಾಡಿದ್ದಾರೆ. ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಲು ವಿವಿ ಸಭೆಯಲ್ಲಿ ನಿರ್ಧಾರ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದರಂತೆ ಜೆಎನ್ ಯು ಜಂಟಿ ಕಾರ್ಯದರ್ಶಿ ಮತ್ತು ಎಬಿವಿಪಿ ಸದಸ್ಯರಾಗಿರುವ ಸೌರಭಾ ಶರ್ಮಾ ಅವರು ಮಾತನಾಡಿ, ಸಮಿತಿ ವರದಿಯನ್ನು ಸಾರ್ವಜನಿಕರಿಗೆ ತಿಳಿಸಿ. ಹಾಗೂ ಪ್ರಕರಣ ಸಂಬಂಧ ವಿದ್ಯಾರ್ಥಿಗಳ ವಿರುದ್ಧ ಕೂಡಲೇ ಕ್ರಮಕೈಗೊಳ್ಳಿ ಎಂದು ವಿವಿಗೆ ಮನವಿ ಮಾಡಿದ್ದಾರೆ.

ಈ ಹಿಂದಷ್ಟೇ ಪ್ರಕಱಣ ಸಂಬಂಧ ಪ್ರಧ್ಯಾಪಕ ಅಮಿತಾ ಸಿಂಗ್ ಅವರು ಹೇಳಿಕೆಯೊಂದನ್ನು ನೀಡಿದ್ದರು. ದಲಿತರು ಹಾಗೂ ಮುಸ್ಲಿಮರು ದೇಶವಿರೋಧಿಗಳು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಹೇಳಿಕೆ ಸಂಬಂಧ ಇದೀಗ ರಾಷ್ಟ್ರೀಯ ಆಯೋಗದಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ವಿವಿ ಪ್ರಾಧ್ಯಾಪಕ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು ಎಂದು ತಿಳಿದುಬಂದಿದೆ. ಅಲ್ಲದೆ, ಹೇಳಿಕೆ ಸಂಬಂಧ ಸ್ಪಷ್ಟನೆ ನೀಡುವಂತೆ ಕೇಳಿದೆ ಎನ್ನಲಾಗಿದೆ.

ತನಿಖಾ ಸಮಿತಿ ವರದಿ ಬೆನ್ನಲ್ಲೇ ಮತ್ತೆ ಜೆಎನ್ ಯು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ಅನಿರ್ಬಾನ್ ಹಾಗೂ ಉಮರ್ ಖಾಲಿದ್ ನನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದೆ. ಇಂದು ಸಂಸತ್ತಿನವರೆಗೂ ಕಾಲ್ನಡಿಗೆ ಮೂಲಕ ಪ್ರತಿಭಟನೆ ನಡೆಸಲು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ. ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ, ಸಾರ್ ಗಿಲಾನಿ ಇದೀಗ ದೇಶದ್ರೇಹ ಪ್ರಕರಣವನ್ನು ಎದುರಿಸುತ್ತಿದ್ದು, ಪ್ರಸ್ತುತ ಜೈಲು ವಾಸದಲ್ಲಿದ್ದಾರೆ. ಇದರಂತೆ ವಿದ್ಯಾರ್ಥಿಗಳು ಆಯೋಜಿಸಿರುವ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಭಾಗಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com