ಜೆಎನ್ ಯು: ಪ್ರಚೋದನಕಾರಿ ಘೋಷಣೆ ಕೂಗಿದ್ದು ಹೊರಗಿನವರು; ತನಿಖಾ ಸಮಿತಿ

ದೇಶದಾದ್ಯಂತ ತೀವ್ರ ವಿವಾದವನ್ನು ಸೃಷ್ಟಿಸಿದ್ದ ಜೆಎನ್ ಯು ಪ್ರಕರಣಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಚೋದನಕಾರಿ ಘೋಷಣೆ ಕೂಗಿದ್ದು ಹೊರಗಿನವರು...
ಜೆಎನ್ ಯು: ಪ್ರಚೋದನಕಾರಿ ಘೋಷಣೆ ಕೂಗಿದ್ದು ಹೊರಗಿನವರು; ತನಿಖಾ ಸಮಿತಿ (ಸಂಗ್ರಹ ಚಿತ್ರ)
ಜೆಎನ್ ಯು: ಪ್ರಚೋದನಕಾರಿ ಘೋಷಣೆ ಕೂಗಿದ್ದು ಹೊರಗಿನವರು; ತನಿಖಾ ಸಮಿತಿ (ಸಂಗ್ರಹ ಚಿತ್ರ)

ನವದೆಹಲಿ: ದೇಶದಾದ್ಯಂತ ತೀವ್ರ ವಿವಾದವನ್ನು ಸೃಷ್ಟಿಸಿದ್ದ ಜೆಎನ್ ಯು ಪ್ರಕರಣಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಚೋದನಕಾರಿ ಘೋಷಣೆ ಕೂಗಿದ್ದು ಹೊರಗಿನವರು ಎಂದು ಉನ್ನತ ಮಟ್ಟದ ತನಿಖಾ ಸಮಿತಿ ಮಾಹಿತಿ ನೀಡಿದೆ.

ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ವಿಶ್ವವಿದ್ಯಾಲಯವು ಈ ಹಿಂದೆ  ಉನ್ನತ ಮಟ್ಟದ ಆಂತರಿಕ ಸಮಿತಿಯನ್ನು ರಚಿಸಿತ್ತು. ಸಮಿತಿಯು ನಿನ್ನೆಯಷ್ಟೇ ತನ್ನ ತನಿಖೆಯ ವರದಿಯನ್ನು ವಿವಿಗೆ ಸಲ್ಲಿಸಿತ್ತು.

ಸಮತಿಯ ಸಲ್ಲಿಸಿರುವ ವರದಿಯಲ್ಲಿ ಫೆ.9ರಂದು ವಿವಿ ಆವರಣದಲ್ಲಿ ಕೇಳಿಬಂದ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದವರು ಹೊರಗಿನವರಾಗಿದ್ದಾರೆ ಹಾಗೂ ದೊರಕಿರುವ ವಿಡಿಯೋಗಳಲ್ಲಿ ಈಗಾಗಲೇ ಹೇಳಲಾಗುತ್ತಿರುವ ಭಾರತ ನಾಶವಾಗುವವರೆಗೂ ಹೋರಾಟ ಮುಂದುವರೆಯುತ್ತದೆ, ಭಾರತವನ್ನು ತುಂಡು ತುಂಡಾಗಿಸುತ್ತೇವೆಂಬ ಯಾವುದೇ ಘೋಷಣೆಗಳು ಕಂಡು ಬಂದಿಲ್ಲ. ಆದರೆ, ಇಂತಹ ಘಟನೆ ನಡೆಯಲು ವಿದ್ಯಾರ್ಥಿಗಳೇ ಅನುವು ಮಾಡಿಕೊಟ್ಟಿರುವುದು ದುರದೃಷ್ಟಕರ ಎಂದು ಹೇಳಿಕೊಂಡಿದೆ.

ಇನ್ನು ವಿವಿಯ ಭದ್ರತೆಯಲ್ಲೂ ಲೋಪ ಕಂಡುಬಂದಿದ್ದು, ಹೊರಗಿನಿಂದ ಜನರು ವಿವಿ ಆವರಣಕ್ಕೆ ಬಂದು ಘೋಷಣೆ ಕೂಗುತ್ತಿದ್ದರೂ ಭದ್ರತಾ ಸಿಬ್ಬಂದಿ ಅವರನ್ನು ತಡೆಯುವ ಯತ್ನವನ್ನು ಮಾಡಿಲ್ಲ. ಅವರನ್ನು ಹೊರ ಕಳುಹಿಸಲು ಯತ್ನ ನಡೆಸಿಲ್ಲ ಎಂದು ಹೇಳಿದೆ.

ಅಲ್ಲದೆ, ವರದಿಯಲ್ಲಿ ಉಮರ್ ಖಾಲಿದ್ ಕಾರ್ಯಕ್ರಮ ಆಯೋಜಿಸಿರುವವರಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ವಿವಿ ನಿರಾಕರಣೆ ಮಧ್ಯೆಯೂ ಭದ್ರತಾ ಸಿಬ್ಬಂದಿ ಏನನ್ನೂ ಬೇಕಾದರೂ ಮಾಡಿಕೊಳ್ಳಲಿ ನಾವು ಮುನ್ನುಗ್ಗುತ್ತೇವೆಂದು ಅಧಿಕಾರಿಗಳಿಗೆ ಹೇಳಿದ್ದಾನೆಂದು ತಿಳಿಸಿದೆ.
ವಿವಿಯ ಪದಾಧಿಕಾರಿಗಳಾದವರೂ ವಿದ್ಯಾರ್ಥಿಗಳ ಕುರಿತಂತೆ ಎಚ್ಚರಿಕೆ ಹಾಗೂ ಸಂಯಮದಿಂದ ವರ್ತಿಸಬೇಕು. ಆದರೆ, ಅವರೂ ಕೂಡ ಬೇಜವಾಬ್ದಾರಿತನವನ್ನು ತೋರಿದ್ದಾರೆ.

ಕಾರ್ಯಕ್ರಮವನ್ನು ವಿವಿ ತಿರಸ್ಕರಿಸಿದ್ದರೂ ವಿದ್ಯಾರ್ಥಿಗಳು ಬೇಕೆಂದೇ ಪ್ರತಿಭಟನೆ ನಡೆಸಿದ್ದಾರೆ. ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ಹೊರಗಿನವರು ವಿವಿ ಆವರಣಕ್ಕೆ ಬಂದು ಘೋಷಣೆಗಳನ್ನು ಕೂಗಿದ್ದಾರೆ. ಹೊರಗಿನಿಂದ ಬಂದ ಸಾಕಷ್ಟು ಮಂದಿ ಮುಖಕ್ಕೆ ಮುಸುಕು ಹಾಗೂ ಬಟ್ಟೆಗಳನ್ನು ಕಟ್ಟಿಕೊಂಡಿದ್ದರೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆಂದು ಹೇಳಿಕೊಂಡಿದೆ.

ಆವರಣಕ್ಕೆ ಬಂದಿರುವ ಗುಂಪೊಂದು ಕಾಶ್ಮೀರಕ್ಕೆ ಸ್ವಾತಂತ್ರ್ಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಭಾರತ ಹಿಂದೆ ಹೋಗು, ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಕೂಗುತ್ತಿದ್ದ ಗುಂಪಿನೊಳಗೆ ಓರ್ವ ವಿದ್ಯಾರ್ಥಿ ಸೇರಿಕೊಂಡಿದ್ದ ಎಂಬುದು ವಿಡಿಯೋದಲ್ಲಿ ಕಂಡು ಬಂದಿದೆ.

ತನಿಖಾ ಸಮಿತಿ ಸಂಗ್ರಹಿಸಿರುವ ವರದಿಯ ಪ್ರಕಾರ, ಎಬಿವಿಪಿ ಸದಸ್ಯನಾಗಿರುವ ಜೆಎನ್ ಯು ಜಂಟಿ ಕಾರ್ಯದರ್ಶಿಯಾಗಿರುವ ಸೌರಭ್ ಶರ್ಮಾ ಅವರು, ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಕಾರ್ಯಕ್ರಮ ನಡೆಯುವ ವೇಳೆ ಮತ್ತೊಂದು ಪ್ರದೇಶದಲ್ಲಿ ಕಾರ್ಯಕ್ರಮ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರೆಂದು ಪ್ರತ್ಯಕ್ಷದರ್ಶಿಯೊಬ್ಬ ಮಾಹಿತಿ ನೀಡಿರುವುದು ವರದಿಯಲ್ಲಿ ತಿಳಿಸಿದೆ.

ತನಿಖಾ ಸಮತಿ ತನಿಖೆ ಹಾಗೂ ಶಿಫಾರಸ್ಸು ಎಂದು ಎರಡು ರೀತಿಯ ವಿಭಾಗ ಮಾಡಿಕೊಂಡು ತನಿಖೆ ನಡೆಸಿದೆ. ತನಿಖಾ ಸಮಿತಿ ಈಗಾಗಲೇ ತನ್ನ ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿ 21 ವಿದ್ಯಾರ್ಥಿಗಳು ತಪ್ಪಿತಸ್ಥರೆಂದು ಹೇಳಿದೆ. ಇದರಂತೆ ಕ್ರಮಕೈಗೊಂಡಿದ್ದ ವಿವಿಯು ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಐವರಿಗೆ ತಾತ್ಕಾಲಿಕವಾಗಿ ನಿಷೇಧ ಹೇರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com