

ನವದೆಹಲಿ: ದೇಶದ್ರೋಹದ ಕಾನೂನನ್ನು ಕಾನೂನು ಆಯೋಗ ಪರಿಶೀಲನೆ ನಡೆಸುತ್ತಿದೆ ಎಂದು ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ರಾಜ್ಯಸಭೆಗೆ ತಿಳಿಸಿದ್ದಾರೆ.
ಕಾನೂನಿನ ಬಗ್ಗೆ ವರದಿ ನೀಡುವಂತೆ ಗೃಹ ಸಚಿವಾಲಯ ಕಾನೂನು ಆಯೋಗಕ್ಕೆ ಸೂಚನೆ ನೀಡಿದೆ ಎಂದಿರುವ ಕಿರಣ್ ರಿಜಿಜು, ದೇಶದ್ರೋಹಿ ಕಾನೂನು ಕೆಲವೊಮ್ಮೆ ವಾಕ್ ಸ್ವಾತಂತ್ರ್ಯವನ್ನು ಉಲ್ಲಂಘನೆ ಮಾಡುತ್ತದೆ ಎಂದು ಹೇಳಿದ್ದಾರೆ. ದೇಶದ್ರೋಹ ಕಾನೂನು ನಿಬಂಧನೆಗಳು ವಿಶಾಲವಾಗಿವೆ. ಕಾನೂನಿನ ಮೂಲಕ ಸ್ಥಾಪಿತವಾದ ಸರ್ಕಾರದ ವಿರುದ್ಧ ಯಾರೇ ಮಾತನಾಡಿದರು ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಿಜಿಜು ತಿಳಿಸಿದ್ದಾರೆ. ಆದರೆ ದೇಶದ್ರೋಹದ ಕಾನೂನು ಸಂವಿಧಾನದ ಅನುಚ್ಛೇಧ 19 (1 )(ಎ)ರ ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘನೆ ಮಾಡುತ್ತದೆ ಎಂದು ರಿಜಿಜು ಹೇಳಿದ್ದಾರೆ.