ಜಾಟ್ ಸಮುದಾಯದ ಗಡುವು ಇಂದಿಗೆ ಮುಕ್ತಾಯ; ಪ್ರತಿಭಟನೆಯ ಬೆದರಿಕೆ

ಮಾರ್ಚ್ 17ರೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆಯನ್ನು ಮತ್ತೆ ಆರಂಭಿಸುವುದಾಗಿ...
ಕಳೆದ ತಿಂಗಳು ಜಾಟ್ ಸಮುದಾಯದವರು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಸಂದರ್ಭ.
ಕಳೆದ ತಿಂಗಳು ಜಾಟ್ ಸಮುದಾಯದವರು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಸಂದರ್ಭ.

ನವದೆಹಲಿ: ಮಾರ್ಚ್ 17ರೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಜಾಟ್ ಸಮುದಾಯದ ನಾಯಕರು ಬೆದರಿಕೆಯೊಡ್ಡಿದ್ದು, ನೀಡಿದ್ದ ಸಮಯ ಇಂದಿಗೆ ಮುಗಿಯುತ್ತದೆ. ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯುವ ಸಾಧ್ಯತೆಯಿರುವುದರಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಅರೆ ಸೇನಾಪಡೆಯನ್ನು ನಿಯೋಜಿಸಲು ಹರ್ಯಾಣ ಸರ್ಕಾರ ಕೇಂದ್ರದ ನೆರವನ್ನು ಕೋರಿದೆ.

ಅರೆಸೇನಾಪಡೆ ನಿಯೋಜನೆಗೆ ಕೇಂದ್ರದ ನೆರವು ಕೋರಲಾಗಿದ್ದು, ಅದು ನಮಗೆ ಸಿಗಲಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಸಂಜಯ್ ಕುಮಾರ್ ತಿಳಿಸಿದ್ದಾರೆ. ರಾಜ್ಯದಿಂದ ಕೂಡ ಹೆಚ್ಚುವರಿ ಪೊಲೀಸ್ ಪಡೆಯ ವ್ಯವಸ್ಥೆ ಮಾಡಲಾಗುವುದು ಎಂದರು.

ಕಳೆದ ತಿಂಗಳು ಹರ್ಯಾಣ ರಾಜ್ಯದಲ್ಲಿ ಜಾಟ್ ಸಮುದಾಯದವರು ನಡೆಸಿದ ಪ್ರತಿಭಟನೆ ವೇಳೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಪೊಲೀಸ್ ಪಡೆ ಸೋತುಹೋಗಿತ್ತು. 30 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಆಗ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ರೊಹ್ ಟಕ್ ಶ್ರೀಕಾಂತ್ ಜಾಧವ್ ಅವರನ್ನು ಹರ್ಯಾಣ ಸರ್ಕಾರ ಸೇವೆಯಿಂದ ವಜಾಗೊಳಿಸಿತ್ತು.

ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಜಾಟ್ ಸಮುದಾಯದವರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡಬೇಕು, ಪ್ರತಿಭಟನಾಕಾರರ ವಿರುದ್ಧ ದಾಖಲಿಸಿರುವ ಎಫ್ ಐಆರ್ ನ್ನು ಹಿಂತೆಗೆದುಕೊಳ್ಳುವುದು, ಪ್ರತಿಭಟನೆ ವೇಳೆ ಸಾವನ್ನಪ್ಪಿದವರಿಗೆ ಪರಿಹಾರ ನೀಡಬೇಕು ಮತ್ತು ಜಾಟ್ ಮೀಸಲಾತಿ ವಿರೋಧಿ ನಿಲುವು ತಳೆದಿರುವ ಬಿಜೆಪಿ ಮುಖಂಡ ಕುರುಕ್ಷೇತ್ರ ರಾಜ್ ಕುಮಾರ್ ಸೈನಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದು ಜಾಟ್ ಸಮುದಾಯದ ಪ್ರತಿಭಟನಾಕಾರರ ಬೇಡಿಕೆಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com