
ನವದೆಹಲಿ:ಎಫ್ ಎಂ ಚಾನೆಲ್ ಗಳ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಅವು ಜನರಿಗೆ ತಲುಪುವ ರೀತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ರೇಡಿಯೋ ಮತ್ತೆ ಜನಮಾನಸವನ್ನು ಹೊಕ್ಕಿದೆ. ರೇಡಿಯೋ ಒಂದು ಉತ್ತಮ ಸಂವಹನ ಮಾಧ್ಯಮ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಮಾಧ್ಯಮದ ಭಿನ್ನರೂಪವಾಗಿ ಸಮುದಾಯ ರೇಡಿಯೋ ಪ್ರಾದೇಶಿಕವಾಗಿ ಅಗತ್ಯವಿರುವ ಮಾಹಿತಿಗಳನ್ನು, ವೈವಿಧ್ಯಮಯ ಸ್ಥಿತಿ, ಸಮಸ್ಯೆಗಳು ಮತ್ತು ಭಾಷೆ, ಸಂಸ್ಕೃತಿ ಹಾಗೂ ಸಾಮಾಜಿಕ ಸಂಪ್ರದಾಯಗಳನ್ನು ಪರಿಚಯಿಸುತ್ತದೆ ಎಂದು ಅರುಣ್ ಜೇಟ್ಲಿ ಇಂದು ದೆಹಲಿಯಲ್ಲಿ 6ನೇ ರಾಷ್ಟ್ರೀಯ ಸಮುದಾಯ ರೇಡಿಯೋ ಸಮ್ಮೇಳನ ಉದ್ಘಾಟಿಸಿ ಹೇಳಿದರು.
ಪ್ರಾದೇಶಿಕ ಮಟ್ಟದಲ್ಲಿ ಸಂವಹನದ ಅಗತ್ಯಗಳಿಗೆ ಅನುಗುಣವಾಗಿ ರೇಡಿಯೋ ವಲಯದ ವಿಸ್ತಾರಣೆಗೆ ಅವಕಾಶವಿದೆ. ಕಾರ್ಯಕ್ರಮದಲ್ಲಿ ಅನುಭವ ಮತ್ತು ವಿಷಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಜನರೊಂದಿಗೆ ಸಂಪರ್ಕಿಸುವ ಸಾಮರ್ಥ್ಯವಿದೆ.ಪರಿಣಾಮವಾಗಿ, ರೇಡಿಯೋ ಸಮರ್ಥನೀಯ ಆಧಾರದಲ್ಲಿ ಬೆಳೆಯಲು ಅವಕಾಶ ಒದಗಿದೆ.
ಭವಿಷ್ಯದಲ್ಲಿ ರೇಡಿಯೋ ಸ್ಟೇಷನ್ ಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಜನರಿಗೆ ಜಾಗೃತಿ ಹುಟ್ಟಿಸುವಂತಹ ಕಾರ್ಯಕ್ರಮಗಳನ್ನು ಮಾಡುತ್ತಿರುವ ರೇಡಿಯೋ ಮಾಧ್ಯಮಕ್ಕೆ ಅವರು ಅಭಿನಂದನೆ ಸಲ್ಲಿಸಿದರು.
ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಕರ್ನಲ್.ರಾಜ್ಯವರ್ಧನ್ ಸಿಂಗ್ ರಾಥೋಡ್ ಮಾತನಾಡಿ, ಸ್ಥಳೀಯ ನಿವಾಸಿಗಳ ಬಲವರ್ಧನೆಗೆ ಸಮುದಾಯ ರೇಡಿಯೋಗಳು ಪ್ರಮುಖ ಸಂವಹನ ಮಾಧ್ಯಮವಾಗಿದೆ. ಸರ್ಕಾರದ ಯೋಜನೆಗಳು ಮತ್ತು ನೀತಿಗಳನ್ನು ಸ್ಥಳೀಯ ನಿವಾಸಿಗಳಿಗೆ ಅವರ ಭಾಷೆಯಲ್ಲಿ ಜನರಿಗೆ ತಲುಪಿಸುವಲ್ಲಿ ರೇಡಿಯೋಗಳ ಪಾತ್ರ ಮಹತ್ವದ್ದಾಗಿದೆ. ಟಿವಿ ವಾಹಿನಿಗಳು ಮತ್ತು ಎಫ್ ಎಂ ರೇಡಿಯೋಗಳಿಂದ ಸಾಧ್ಯವಾಗದಿರುವ ಕೆಲಸಗಳನ್ನು ಸಮುದಾಯ ರೇಡಿಯೋಗಳು ಮಾಡಿವೆ ಎಂದು ಶ್ಲಾಘಿಸಿದರು.
Advertisement