ಓವೈಸಿ ವಿರುದ್ಧ ರಾಷ್ಟ್ರವ್ಯಾಪ್ತಿ ಹೋರಾಟಕ್ಕೆ ಶ್ರೀರಾಮ ಸೇನೆ ನಿರ್ಧಾರ?

ಕುತ್ತಿಗೆ ಮೇಲೆ ಚೂರಿ ಇಟ್ಟರು 'ಭಾರತ್ ಮಾತಾಕಿ ಜೈ' ಎಂದು ಹೇಳುವುದಿಲ್ಲ ಎಂದು ಹೇಳಿದ್ದ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಹೇಳಿಕೆಗೆ ಶ್ರೀರಾಮ ಸೇನೆ ಕಿಡಿಕಾರಿದ್ದು...
ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ
ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ

ನವದೆಹಲಿ: ಕುತ್ತಿಗೆ ಮೇಲೆ ಚೂರಿ ಇಟ್ಟರು 'ಭಾರತ್ ಮಾತಾಕಿ ಜೈ' ಎಂದು ಹೇಳುವುದಿಲ್ಲ ಎಂದು ಹೇಳಿದ್ದ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಹೇಳಿಕೆಗೆ ಶ್ರೀರಾಮ ಸೇನೆ ಕಿಡಿಕಾರಿದ್ದು, ಇದೀಗ ಓವೈಸಿ ವಿರುದ್ಧ ರಾಷ್ಟ್ರವ್ಯಾಪ್ತಿ ಹೋರಾಟ ನಡೆಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಓವೈಸಿ ಹೇಳಿಕೆ ಸಂಬಂಧ ರಾಯಚೂರಿನಲ್ಲಿ ಹೇಳಿಕೆ ನೀಡಿರುವ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು, ಓವೈಸಿಯವರ ವರ್ತನೆ ಹಾಗೂ ಅವರ ಬೆಂಬಲಿಗರನ್ನು ನಾವು ವಿರೋಧಿಸುತ್ತೇವೆ. ಓವೈಸಿ ಹೇಳಿಕೆಯನ್ನು ನಾವು ಸಹಿಸುವುದಿಲ್ಲ. ಹೇಳಿಕೆ ನಿಜಕ್ಕೂ ದೇಶದ ಸಮಗ್ರತೆ ವಿರುದ್ಧವಾದದ್ದು, ಈ ಕೂಡಲೇ ಅವರನ್ನು ಸಂಸತ್ತಿನಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಭಾರತದ ಪರ ಘೋಷಣೆ ಕೂಗಲು ಸಾಧ್ಯವಿಲ್ಲ ಎಂದು ಹೇಳುತ್ತಿರುವ ಓವೈಸಿಯವರನ್ನು ದೇಶ ಬಿಡಲು ಹೇಳಿ. ಅವರಿಗೆ ಎಲ್ಲಿ ಇಷ್ಟವಾಗುತ್ತದೆಯೋ ಅಲ್ಲೇ ಹೋಗಲಿ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಓವೈಸಿ ಹೇಳಿಕೆಯನ್ನು ವಿರೋಧಿಸಿರುವ ಶ್ರೀರಾಮ ಸೇನೆಯು ಇದೀಗ ಓವೈಸಿ ವಿರುದ್ಧ ರಾಷ್ಟ್ರದ ಪ್ರಮುಖ ನಗರದಲ್ಲಿ ಪ್ರತಿಭಟನೆ ಹಾಗೂ ಹೋರಾಟ ನಡೆಸಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಜೆಎನ್ ಯು ಪ್ರಕರಣಕ್ಕೆ ಸಂಬಂಧಿಸಿ ಆರ್ ಎಸ್ಎಸ್ ಸಭೆಯಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ ಅವರು, ಜೆಎನ್ ಯು ಆವರಣದಲ್ಲಿ ದೇಶ ವಿರೋಧಿ ಘೋಷಣೆಗಳು ಕೇಳಿಬಂದಿವೆ. ಪ್ರತಿಯೊಬ್ಬರೂ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗವಂತಾಗಬೇಕು. ಯುವಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಇದು ಪೂರಕವಾಗಬೇಕೆಂದು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಓವೈಸಿ, ನನ್ನ ಕುತ್ತಿಗೆ ಮೇಲೆ ಚೂರಿ ಇಟ್ಟರೂ ನಾನು ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ. ಘೋಷಣೆಯನ್ನು ಕೂಗಿ, ದೇಶಭಕ್ತಿ ಸಾಬೀತುಪಡಿಸಬೇಕೆಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ. ಹಾಗಾಗಿ ಕಾನೂನು ಉಲ್ಲಂಘನೆಯ ಪ್ರಶ್ನೆ ಇಲ್ಲಿ ಹುಟ್ಟುವುದಿಲ್ಲ. ಈ ನಿಲುವಿಗೆ ನಾನು ಬದ್ಧನಾಗಿದ್ದೇನೆ ಯಾವುದೇ ಕಾರಣಕ್ಕೂ ಘೋಷಣೆ ಕೂಗುವುದಿಲ್ಲ.

ನಾನು ಈ ದೇಶದ ಸಂವಿಧಾನವನ್ನು ಪಾಲಿಸುತ್ತೇನೆ. ಆದರೆ, ಘೋಷಣೆ ಕೂಗುವಂತೆ ಯಾರಿಗೂ ಒತ್ತಾಯ ಮಾಡುವುದಿಲ್ಲ. ಆರ್ ಎಸಎಸ್ ತಮ್ಮ ಸಿದ್ಧಾಂತವನ್ನು ಜನರ ಮೇಲೆ ಹೇರಲು ಯತ್ನಿಸುತ್ತಿದೆ. ಈ ವಿಚಾರವಾಗಿ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ. ನಾನಂತೂ ಘೋಷಣೆ ಕೂಗುವುದಿಲ್ಲ ಈಗ ಏನು ಮಾಡುತ್ತೀರಿ ಭಾಗವತ್ ಸಾಬ್ ಎಂದು ಓವೈಸಿ ಪ್ರಶ್ನಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com