ಲಷ್ಕರ್'ನೊಂದಿನ ನಂಟಿನ ಬಗ್ಗೆ ತಹವ್ವೂರ್ ರಾಣಾಗೆ ತಿಳಿದಿತ್ತು: ಹೆಡ್ಲಿ

ಸಹವರ್ತಿ ಹಾಗೂ ಕೆನಡಾ ಮೂಲದ ಪಾಕಿಸ್ತಾನಿ ಉದ್ಯಮಿ ತಹವ್ವೂರ್ ರಾಣಾಗೆ ನಾನು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವುದು ತಿಳಿದಿತ್ತು...
ಲಷ್ಕರ್'ನೊಂದಿನ ನಂಟಿನ ಬಗ್ಗೆ ತಹವ್ವೂರ್ ರಾಣಾಗೆ ತಿಳಿದಿತ್ತು: ಹೆಡ್ಲಿ
ಲಷ್ಕರ್'ನೊಂದಿನ ನಂಟಿನ ಬಗ್ಗೆ ತಹವ್ವೂರ್ ರಾಣಾಗೆ ತಿಳಿದಿತ್ತು: ಹೆಡ್ಲಿ

ಮುಂಬೈ: ಸಹವರ್ತಿ ಹಾಗೂ ಕೆನಡಾ ಮೂಲದ ಪಾಕಿಸ್ತಾನಿ ಉದ್ಯಮಿ ತಹವ್ವೂರ್ ರಾಣಾಗೆ ನಾನು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವುದು ತಿಳಿದಿತ್ತು ಎಂದು 26/11 ಮುಂಬೈ ಸ್ಫೋಟದ ರುವಾರಿ ಡೇವಿಡ್ ಹೆಡ್ಲಿ ಹೇಳಿಕೊಂಡಿದ್ದಾನೆ.

ಹೆಡ್ಲಿ ಪಾಟಿ ಸವಾಲು ಪ್ರಕ್ರಿಯೆ ಮುಂಬೈ ನಲ್ಲಿ ನಡೆಯುತ್ತಿದ್ದು, ವಕೀಲ ಅಬ್ದುಲ್ ವಾಹೆಬ್ ಖಾನ್ ಅವರು ಪಾಟಿ ಸವಾಲು ನಡೆಸುತ್ತಿದ್ದಾರೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್  ಆಗಿರುವ ಉಜ್ವಲ್ ನಿಖಾಮ್, ಮುಂಬೈ ಅಪರಾಧ ವಿಭಾಗದ ಮುಖ್ಯಸ್ಥ ಅತುಲ್ ಕುಲ್ಕರ್ಣಿ ಅವರು ವಿಚಾರಣೆ ಪ್ರಕ್ರಿಯೆಯಲ್ಲಿ ಹಾಜರಿದ್ದಾರೆಂದು ತಿಳಿದುಬಂದಿದೆ.

ವಿಚಾರಣೆ ವೇಳೆ ವಾಹೆಬ್ ಖಾನ್ ಅವರು ಹೆಡ್ಲಿಗೆ ರಾಣಾ ಕುರಿತಂತೆ ಪ್ರಶ್ನೆಗಳನ್ನು ಕೇಳಿದ್ದು, ಈ ಬಗ್ಗೆ ಹೆಡ್ಲಿ ಉತ್ತರ ನೀಡಿದ್ದಾನೆ. ಮುಂಬೈ ಮೇಲೆ ದಾಳಿ ನಡೆಸುವುದಕ್ಕೂ 4-5 ತಿಂಗಳಿಗೂ ಮುನ್ನ ರಾಣಾಗೆ ನಾನು ಲಷ್ಕರ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು ಹಾಗೂ ಗೂಢಾಚಾರ್ಯ ಮಾಡುತ್ತಿದ್ದದ್ದು ಗೊತ್ತಿತ್ತು. ಈ ಬಗ್ಗೆ ನಾನು ಆತನ ಬಳಿ ಹೇಳಿಕೊಂಡಿದ್ದೆ. ಆದರೆ, ರಾಣಾಗೆ ನಾನು ಲಷ್ಕರ್ ಜೊತೆಗಿರುವುದು ಇಷ್ಟವಿರಲಿಲ್ಲ.

ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಲಷ್ಕರ್ ಜೊತೆಗಿನ ಸಂಬಂಧವನ್ನು ಮುರಿಯುವಂತೆ ತಿಳಿಸಿದ್ದ ಎಂದು ಹೇಳಿದ್ದಾನೆ.

ಇದೇ ವೇಳೆ ತನ್ನ ಪತ್ನಿ ಶಾಜ್ಯಾ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿರುವ ಹೆಡ್ಲಿ, ಶಾಜ್ಯಾ ಕಾನೂನಾತ್ಮಕವಾಗಿ ನನ್ನ ಪತ್ನಿಯಾಗಿದ್ದಾಳೆ. ಪ್ರಸ್ತುತ ಆಕೆಯಿರುವ ಸ್ಥಳವನ್ನು ನಾನು ಬಹಿರಂಗ ಪಡಿಸುವುದಿಲ್ಲ. ನನ್ನ ಪತ್ನಿ ಬಗೆಗಿನ ಯಾವುದೇ ಪ್ರಶ್ನೆಗೂ ನಾನು ಉತ್ತರ ನೀಡುವುದಿಲ್ಲ ಎಂದು ಹೇಳಿದ್ದಾನೆ.

ನನ್ನ ಪತ್ನಿ ಎಂದಿಗೂ ಭಾರತಕ್ಕೆ ಭೇಟಿ ನೀಡಿಲ್ಲ. ಆಕೆ ಮೂಲತಃ ಪಾಕಿಸ್ತಾನದವಳಾಗಿದ್ದಾಳೆ. ಶಾಜ್ಯಾ ಬಳಿ  ಎಲ್ ಇಟಿ ನಂಟಿನ ಬಗ್ಗೆ ಹೇಳಿಕೊಂಡಿದ್ದೆ. ಯಾವಾಗ ಈ ವಿಚಾರವನ್ನು ಹೇಳಿದ್ದೆ ಎಂಬುದು ನೆನಪಿಲ್ಲ ಎಂದು ಹೇಳಿದ್ದಾನೆ.

ಇದೇ ವೇಳೆ ಉಗ್ರ ಸಂಘಟನೆ ನಂಟಿನ ಬಗ್ಗೆ ಪತ್ನಿ ತಿಳಿದಾಗ ಆಕೆಯ ಪ್ರತಿಕ್ರಿಯೆ ಹೇಗಿತ್ತು ಎಂಬ ಪ್ರಶ್ನೆಗೆ ಗರಂ ಆದ ಹೆಡ್ಲಿ, ಪತ್ನಿ ಪ್ರತಿಕ್ರಿಯೆ ನನ್ನ ಮತ್ತು ಆಕೆಯ ವೈಯಕ್ತಿಕ ವಿಚಾರ. ಆಕೆ ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ್ದಳೋ ಅಥವಾ ಬೆಂಬಲಿಸಿದ್ದಳೋ ಎಂಬುದು ನಮ್ಮಿಬ್ಬರ ವಿಚಾರ. ನನ್ನ ಮತ್ತು ಪತ್ನಿ ನಡುವಿನ ವಿಚಾರವನ್ನು ಹೇಳುವುದಿಲ್ಲ ಎಂದಿದ್ದಾನೆ. ಅಲ್ಲದೆ, ನನ್ನ ಪತ್ನಿಗೆ ನಾನು ಹೆಸರು ಬದಲಿಸಿಕೊಳ್ಳುತ್ತಿರುವುದರ ಬಗ್ಗೆ ತಿಳಿದಿತ್ತು ಎಂದು ಹೇಳಿದ್ದಾನೆ.

ಮತ್ತೆ ಖಾನ್ ಅವರು ಹೆಡ್ಲಿಯನ್ನು ಶಾಜ್ಯಾ ಬಗ್ಗೆ ಪ್ರಶ್ನಿಸಲು ಮುಂದಾದಾಗ ಮಧ್ಯೆ ಪ್ರವೇಶಿಸಿರುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಖಾಮ್ ಅವರು,  ಭಾರತೀಯ ದಂಡ ಸಂಹಿತೆ 122ರ ಪ್ರಕಾರ ಪತಿ ಹಾಗೂ ಪತ್ನಿ ನಡುವಿನ ವಿಚಾರಗಳನ್ನು ಕೇಳಬಾರದು ಹಾಗೂ ಅದನ್ನು ಬಹಿರಂಗಪಡಿಸಬಾರದು ಎಂದು ಹೇಳಿದೆ. ಹೀಗಾಗಿ ಹೆಡ್ಲಿ ಪತ್ನಿ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳಬಾರದು ಎಂದು ಹೇಳಿದರು. ಪ್ರಸ್ತುತ ಹೆಡ್ಲಿ ವಿಚಾರಣೆ ಮುಂದುವರೆಯುತ್ತಿದೆ ಎಂದು ತಿಳಿದುಬಂದಿದೆ.

ಬಂಧನಕ್ಕೊಳಗಾಗಿರುವ ಡೇವಿಡ್ ಹೆಡ್ಲಿಯನ್ನು ಈ ಹಿಂದೆ ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿತ್ತು. ಶಿಕಾಗೋ ಜೈಲಿನಿದಂ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈ ನ ಸೆಷನ್ಸ್ ನ್ಯಾಯಾಲಯ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಹೆ್ಲಿ ತಪ್ಪೊಪ್ಪಿಗೆ ನೀಡಿದ್ದ. ಅಲ್ಲದೆ, ಜಿಹಾದಿ, ಲಷ್ಕರ್, ಹಫೀಜ್ ಸಯೀದ್ ಸೇರಿದಂತೆ ಅನೇಕ ರಹಸ್ಯಗಳನ್ನು ಹೊರ ಹಾಕಿದ್ದ. 26/11 ಮುಂಬೈ ದಾಳಿಗೂ ಮುನ್ನ ಭಾರತಕ್ಕೆ 8 ಬಾರಿ ಭೇಟಿ ನೀಡಿದ್ದೆ. ಲಷ್ಕರ್ ಇ-ತೊಯ್ಬಾ ಹಿಂಬಾಲಕನಾಗಿ ಸಂಪರ್ಕ ಹೊಂದಿದ್ದೆ ಎಂದು ಹೇಳಿಕೊಂಡಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com