
ನವದೆಹಲಿ: ವಿಶ್ವದಲ್ಲೇ ಅತಿ ಕಡಿಮೆ ಬೆಲೆಗೆ ಅಂದರೆ 251 ರು. ಗೆ ಸ್ಮಾರ್ಟ್ ಫೋನ್ ನೀಡುವುದಾಗಿ ಭಾರಿ ಸುದ್ದಿ ಮಾಡಿದ್ದ ರಿಂಗಿಂಗ್ ಬೆಲ್ಸ್ ಕಂಪನಿ ವಿರುದ್ಧ ನೊಯ್ಡಾ ಪೊಲೀಸರು ಗುರುವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮುಂಬೈನ ಬಿಜೆಪಿ ಸಂಸದ ಕಿರಿಟ್ ಸೋಮಿಯಾ ನೀಡಿದ ದೂರಿನ ಮೇರೆಗೆ ನೊಯ್ಡಾದ ಫೇಸ್ 3 ಪೊಲೀಸ್ ಠಾಣೆಯ ಪೊಲೀಸರು ಸೆಕ್ಷನ್ 420 ಪ್ರಕಾರ ರಿಂಗಿಂಗ್ ಸಂಸ್ಥೆಯ ಪ್ರಚಾರಕ ಮೋಹಿತ್ ಗೋಯೆಲ್ ಹಾಗೂ ಅಧ್ಯಕ್ಷ ಅಶೋಕ್ ಚಡ್ಢಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಜಾಹೀರಾತು ನೀಡಿ ಸಾರ್ವಜನಿಕರಿಂದ ಅಕ್ರಮವಾಗಿ ಹಣ ಸಂಗ್ರಹ ಮಾಡಲಾಗಿದೆ ಎಂದು ಕಿರಿಟ್ ಸೋಮಿಯಾ ದೂರಿನಲ್ಲಿ ಆರೋಪಿಸಿದ್ದರು. ಈ ಬಗ್ಗೆ ಪೊಲೀಸರು ಫ್ರೀಡಂ 251 ಮೊಬೈಲ್ಗೆ ಸಂಬಂಧಪಟ್ಟ ದಾಖಲೆಗಳು ಮತ್ತು ಉತ್ಪಾದನಾ ಘಟಕದ ಬಗ್ಗೆ ಮಾಹಿತಿ ನೀಡುವಂತೆ ಕಂಪನಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
Advertisement