
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಸರ್ಕಾರ ರಚನೆ ಸಂಬಂಧ ಪಿಡಿಪಿ ಶಾಸಕರು ಇಂದು ಸಭೆ ನಡೆಸಲಿದ್ದು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಪಿಡಿಪಿ-ಬಿಜೆಪಿ ಮೈತ್ರಿ ಮುಂದುವರೆಸುವುದರ ಬಗ್ಗೆಯೂ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಮಾ.22 ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ, ಮೈತ್ರಿ ಸರ್ಕಾರ ಮುಂದುವರೆಸುವ ಬಗ್ಗೆ ಮಾತುಕತೆ ನಡೆಸಿದ್ದರು.
ಮಾತುಕತೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಮೆಹಬೂಬಾ ಮುಫ್ತಿ, ಪ್ರಧಾನಿಯೊಂದಿಗಿನ ಮಾತುಕತೆ ಸಕಾರಾತ್ಮಕವಾಗಿತ್ತು, ಶೀಘ್ರವೇ ಕಾಶ್ಮೀರದಲ್ಲಿ ಸರ್ಕಾರ ರಚನೆ ಬಿಕ್ಕಟ್ಟನ್ನು ಅಂತ್ಯಗೊಳಿಸಲು ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು. ಏತನ್ಮಧ್ಯೆ ಕಾಶ್ಮೀರ ರಾಜ್ಯಪಾಲ ಎನ್ ಎನ್ ವೋಹ್ರಾ ಪಿಡಿಪಿ ಹಾಗೂ ಬಿಜೆಪಿ ಮುಖಂಡರ ಪ್ರತ್ಯೇಕ ಸಭೆ ಕರೆದಿದ್ದಾರೆ. ಸರ್ಕಾರ ರಚನೆ ಸಂಬಂಧ ಪಿಡಿಪಿಯ ಹೊಸ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿಲ್ಲ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ.
Advertisement