
ಲಖನೌ: ಸರ್ಕಾರವನ್ನು ಸರಿಯಾಗಿ ಸಮರ್ಥಿಸಿಕೊಳ್ಳಲಿಲ್ಲ ಎಂಬ ಕಾರಣಕ್ಕಾಗಿ ಅಡಿಷನಲ್ ಅಡ್ವೋಕೇಟ್ ಜನರಲ್ ಗೌರವ್ ಭಾಟಿಯಾ ಸೇರಿದಂತೆ ಇಬ್ಬರು ಉನ್ನತ ಕಾನೂನು ಅಧಿಕಾರಿಗಳನ್ನು ಉತ್ತರ ಪ್ರದೇಶ ಸರ್ಕಾರವು ವಜಾ ಮಾಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ದಿವಂಗತ ವೀರೇಂದ್ರ ಭಾಟಿಯಾ ಅವರ ಪುತ್ರ ಗೌರವ್ ಭಾಟಿಯಾ ಮತ್ತು ರೀನಾ ಸಿಂಗ್ ಅವರನ್ನು ಹುದ್ದೆಗಳಿಂದ ಕಿತ್ತು ಹಾಕಲಾಗಿದೆ ಎಂದು ವಿಶೇಷ ಕಾರ್ಯದರ್ಶಿ(ಕಾನೂನು) ಅಮರ್ ಜೀತ್ ತ್ರಿಪಾಠಿ ಅವರು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರ ನನ್ನನ್ನು ವಜಾ ಮಾಡಿಲ್ಲ, ನಾನೇ ರಾಜಿನಾಮೆ ನೀಡಿರುವೆ
ಇನ್ನು ಗೌರವ್ ಭಾಟಿಯಾ ಅವರು ಮಾತ್ರ ತಾವು ಅಡಿಷನಲ್ ಅಡ್ವೋಕೇಟ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಫೇಸ್ಬುಕ್ ಪೋಸ್ಟಿನಲ್ಲಿ ತಿಳಿಸಿದ್ದು ಸಹಕರಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದ್ದಾರೆ.
ಈ ಕುರಿತಂತೆ ಸಮಾಜವಾದಿ ಪಕ್ಷದ ಕಾಲೆಳೆದಿರುವ ಬಿಜೆಪಿ ರಾಜ್ಯ ವಕ್ತಾರ ವಿಜಯ್ ಬಹಾದುರ್ ಪಾಠಕ್ ಅವರು, ಬೆಳವಣಿಗೆಯನ್ನು ಜಿಜ್ಞಾಸೆಗೆ ಯೋಗ್ಯವಾದ ಬೆಳವಣಿಗೆ ಎಂದು ಬಣ್ಣಿಸಿದ್ದು, ಇದು ವಜಾವೋ ಅಥವಾ ರಾಜೀನಾಮೆಯೋ ಎಂಬುದರ ಬಗ್ಗೆ ಗೊಂದಲ ಹುಟ್ಟಿರುವುದರ ಹೊರತಾಗಿ ಸಮಾಜವಾದಿ ಪಕ್ಷಕ್ಕೆ ಜನರ ಬಗ್ಗೆ ಎಂತಹ ಅನಾದರ ಇದೆ ಎಂಬುದು ಜಗಜ್ಜಾಹೀರಾಗಿದೆ ಎಂದು ಹೇಳಿದ್ದಾರೆ.
Advertisement