ನವದೆಹಲಿ: ಯುವಕರ ಗುಂಪೊಂದು ಕ್ಷುಲ್ಲಕ ಕಾರಣಕ್ಕೆ ದಂತ ವೈದ್ಯರೊಬ್ಬರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶುಕ್ರವಾರ 9 ಆರೋಪಿಗಳನ್ನು ಬಂಧಿಸಿದ್ದಾರೆ.
ದೆಹಲಿಯ ವಿಕಾಸ್‌ಪುರಿ ಪ್ರದೇಶದ ನಿವಾಸಿ, 40 ವರ್ಷದ ದಂತವೈದ್ಯ ಡಾ. ಪಂಕಜ್ ನಾರಂಗ್ ಅವರು ನಿನ್ನೆ ರಾತ್ರಿ 12 ಗಂಟೆಯ ಸುಮಾರಿಗೆ ತಮ್ಮ ಮನೆಯ ಬಾಲ್ಕನಿಯಲ್ಲಿ ಮಗನೊಂದಿಗೆ ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಬಾಲ್ ರಸ್ತೆಗೆ ಬಂದಿದ್ದು, ಅದನ್ನು ಎತ್ತಿಕೊಳ್ಳಲು ವೈದ್ಯರ ಪುತ್ರ ಕೆಳಗಡೆ ಬಂದಾಗ ಬೈಕ್ ವೊಂದು ಅತಿವೇಗವಾಗಿ ಚಲಿಸುತ್ತಿರುತ್ತದೆ. ಬೈಕ್ ತಡೆದ ನಾರಂಗ್ ನಿಧಾನವಾಗಿ ಚಲಿಸುವಂತೆ ಬುದ್ಧಿವಾದ ಹೇಳಿದ್ದಾರೆ. ಈ ವೇಳೆ ಇಬ್ಬರ ಮಧ್ಯ ಮಾತಿನ ಚಕಮಕಿ ನಡೆದಿದೆ ಎಂದು ಡಿಸಿಪಿ ಪುಷ್ಪೇಂದ್ರ ಕುಮಾರ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ವಾಗ್ವಾದದ ನಂತರ ಬೈಕ್ ಸವಾರ ಸಮೀಪದ ಜೆಜೆ ಕ್ಯಾಂಪ್ ನಿಂದ ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ವೈದ್ಯ ನಾರಂಗ್ ಮೇಲೆ ಬಡಿಗೆ ಮತ್ತು ಕಬ್ಬಿಣದ ರಾಡ್‌ಗಳಿಂದ ಹತ್ಯೆ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಾವು ಇದುವರೆಗೆ ಒಂಬತ್ತು ಆರೋಪಿಗಳನ್ನು ಬಂಧಿಸಿದ್ದು, ಅವರಲ್ಲಿ ನಾಲ್ವರು ಬಾಲಾಪರಾಧಿಗಳಾಗಿದ್ದಾರೆ. ಬಂಧಿತ ಆರೋಪಿಗಳನ್ನು ಗೋಪಾಲ್ ಸಿಂಗ್, ನಾಸೀರ್ ಖಾನ್, ಆಮೀರ್ ಖಾನ್ ಹಾಗೂ ಓರ್ವ ಯುವತಿ ಮಾಯಾಸರ್ ಎಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಧ್ಯ ರಾತ್ರಿ 12 ಗಂಟೆಗೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ, ಪೊಲೀಸರು ಬರುವ ವೇಳೆಗೆ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳಲ್ಲಿ ನಾಲ್ವರು ಅಪ್ರಾಪ್ತ ಬಾಲಕರು ಸೇರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ವೈದ್ಯ ನಾರಂಗ್‌ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.