

ನವದೆಹಲಿ: ದೆಹಲಿಯ ಆಮ್ ಆದ್ಮಿ ಪಕ್ಷದ ಸಚಿವ ಕಪಿಲ್ ಮಿಶ್ರಾ ಎಲ್ಲರ ಹುಬ್ಬೇರಿಸುವಂತಹ ಹೇಳಿಕೆ ನೀಡಿದ್ದು ಭಗತ್ ಸಿಂಗ್ ಇಂದು ಬದುಕಿದ್ದಿದ್ದರೆ ಸಂಸತ್ ಒಳಗೆ ಬಾಂಬ್ ಹಾಕ್ತಿದ್ರು ಎಂದಿದ್ದಾರೆ.
ಭಗತ್ ಸಿಂಗ್ ಇಂದು ಬದುಕಿದ್ದು ದೇಶದ ಸ್ಥಿತಿಯನ್ನು ನೋಡಿದ್ದಿದ್ದರೆ ಸಂಸತ್ ಒಳಗೆ ಕುಳಿತಿರುವ ಕಿವುಡರಿಗೆ ಕೇಳಿಸುವಂತೆ ಮಾಡಲು 2 -4 ಬಾಂಬ್ ಗಳನ್ನು ಸಿಡಿಸುತ್ತಿದ್ದರು ಎಂದು ಸಚಿವ ಕಪಿಲ್ ಮಿಶ್ರಾ ಹೇಳಿದ್ದಾರೆ. ಮಹಾತ್ಮಾ ಗಾಂಧಿ ಬಗ್ಗೆಯೂ ಮಾತನಾಡಿರುವ ಕಪಿಲ್ ಮಿಶ್ರಾ, ಮಹಾತ್ಮಾ ಗಾಂಧಿ ಬದುಕಿದ್ದಿದ್ದರೆ ಸತ್ಯಾಗ್ರಹ ಚಳುವಳಿಯನ್ನು ಮುಂದುವರೆಸುತ್ತಿದ್ದರು ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರ ಸರ್ಕಾರ ರಚನೆಯ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಮಿಶ್ರಾ, ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಭಾರತ್ ಮಾತಾ ಕಿ ಜೈ ಘೋಷವಾಕ್ಯ ಹೇಳದೇ ಇದ್ದರೂ ಬಿಜೆಪಿ ಪಿಡಿಪಿಯೊಂದಿಗೆ ಸರ್ಕಾರ ರಚನೆ ಮಾಡಲಿದೆಯೇ ಎಂದು ಪ್ರಶ್ನಿಸಿದ್ದಾರೆ.