ನಾನು ಅಸ್ಸಾಂ ಚಹಾ ಮಾರಿದ್ದೇನೆ; ಈ ರಾಜ್ಯದೊಂದಿಗೆ ವಿಶೇಷ ಬಾಂಧವ್ಯವಿದೆ: ನರೇಂದ್ರ ಮೋದಿ

ನಾನು ಅಸ್ಸಾಂ ಜನತೆಯೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದೇನೆ. ಇಲ್ಲಿನ ಚಹಾವನ್ನು ಜನರಿಗೆ ಮಾರಾಟ ಮಾಡಿ...
ಅಸ್ಸಾಂನ ಟಿನ್ಸುಕಿಯಾದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಅಸ್ಸಾಂನ ಟಿನ್ಸುಕಿಯಾದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ

ಟಿನ್ಸುಕಿಯಾ(ಅಸ್ಸಾಂ): ''ನಾನು ಅಸ್ಸಾಂ ಜನತೆಯೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದೇನೆ. ಇಲ್ಲಿನ ಚಹಾವನ್ನು ಜನರಿಗೆ ಮಾರಾಟ ಮಾಡಿ ನಾನು ನನ್ನ ಬಾಲ್ಯ ಜೀವನವನ್ನು ಕಳೆದಿದ್ದೇನೆ. ಜನತೆಯ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ'' ಹೀಗೆಂದು ನೆನಪಿನ ಬುತ್ತಿಗೆ ಜಾರಿದವರು ಪ್ರಧಾನ ಮಂತ್ರಿ ನರೇಂದ್ರ ಮೋದಿ.

ಅವರಿಂದು ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯಲ್ಲಿ ಬಿಜೆಪಿ ಪರ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡುವಾಗ ಹೀಗಂದರು.

ರ್ಯಾಲಿಯಲ್ಲಿ ಹೊಸ ಘೋಷಣೆ ಮಾಡಿದ ಪ್ರಧಾನಿ, ''ನಾನು ಗೊಗೈ ವಿರುದ್ಧ ಹೋರಾಡುವುದಿಲ್ಲ, ಬದಲಾಗಿ ಗರೀಬಿ(ಬಡತನ) ವಿರುದ್ಧ ಹೋರಾಡುತ್ತೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗೈ ಅವರನ್ನುದ್ಜೇಶಿಸಿ ಹೇಳಿದರು. ಅಸ್ಸಾಂನಲ್ಲಿ ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದು, ಈ ಬಾರಿ ಬಿಜೆಪಿ ಶತಾಯಗತಾಯ ಅಲ್ಲಿ ಗೆಲ್ಲುವ ಪಣ ತೊಟ್ಟಿದೆ.

ಕೇಂದ್ರ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಸರ್ಬಾನಂದ ಸೋನೋವಾಲ್ ಅವರ ಲೋಕಸಭಾ ಕ್ಷೇತ್ರ ಕೂಡ ಆಗಿರುವ ಟಿನ್ಸುಕಿಯಾದಲ್ಲಿ ಮೋದಿಯವರು ಸಚಿವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಬಿಂಬಿಸಿದರು.

''ಈ ಚುನಾವಣೆಯಿಂದ ದಹಲಿಗೆ ಭಾರೀ ನಷ್ಟವಾಗಲಿದೆ. ನನ್ನ ಮೇಲೆ ಕೂಡ ಪರಿಣಾಮ ಬೀರಲಿದೆ. ನನ್ನ ಸಂಪುಟದಲ್ಲಿ ಸರ್ಬಾನಂದ ಅತ್ಯಂತ ಪ್ರಮುಖರು. ಅಸ್ಸಾಂನಲ್ಲಿ ಬಿಜೆಪಿ ಗೆದ್ದರೆ ನಾನು ಅವರನ್ನು ಜನರ ಸೇವೆ ಮಾಡಲು ರಾಜ್ಯಕ್ಕೆ ಕಳುಹಿಸಬೇಕು'' ಎಂದು ಮೋದಿ ಹೇಳಿದರು.

'' ಸರ್ಬಾನಂದ ಅವರು 79 ವರ್ಷದ ಮುಖ್ಯಮಂತ್ರಿ ತರುಣ್ ಗೋಗೈ ಅವರೊಂದಿಗೆ ಸ್ಪರ್ಧಿಸುತ್ತಿದ್ದಾರೆ. ಅವರು ಇನ್ನು ಕೆಲ ವರ್ಷಗಳಲ್ಲಿ 90 ವರ್ಷದವರಾಗುತ್ತಾರೆ. ಅವರು ನಾನು ಮೋದಿಯವರೊಂದಿಗೆ ಹೋರಾಡುತ್ತೇನೆ ಎನ್ನುತ್ತಾರೆ. ನನಗೆ ಅವರ ಮೇಲೆ ಗೌರವವಿದೆ. ನಿಮಗೆ ವಯಸ್ಸಾಯಿತು'' ಎಂದು ಮುಖ್ಯಮಂತ್ರಿಯನ್ನುದ್ದೇಶಿಸಿ ಹೇಳಿದರು.

'' ಅಸ್ಸಾಂ ದೇಶದ ಐದು ಬಡ ರಾಜ್ಯಗಳಲ್ಲಿ ಒಂದಾಗಿದೆ. ಹಿಂದೆ ಶ್ರೀಮಂತವಾಗಿತ್ತು. ಯಾರದನ್ನು ಬಡ ರಾಷ್ಟ್ರವನ್ನಾಗಿ ಮಾಡಿದ್ದು? ಶಾಲೆಗಳಲ್ಲಿ ಮಕ್ಕಳಿಗೆ ಎ ಅಂದರೆ ಅಸ್ಸಾಂ ಎಂದು ಪಾಠ ಮಾಡುವ ದಿನಗಳು ದೂರವಿಲ್ಲ. ರಾಜ್ಯದ ಅಭಿವೃದ್ಧಿಯೇ ನಮ್ಮ ಪಕ್ಷದ ಮೂಲಮಂತ್ರ' ಎಂದರು.

ಮೋದಿಯವರು ಇಂದು ಮತ್ತು ನಾಳೆ ಸೇರಿ ಅಸ್ಸಾಂ ರಾಜ್ಯದಲ್ಲಿ ಒಟ್ಟು ಏಳು ರ್ಯಾಲಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿಯು ರಾಜ್ಯದ ಒಟ್ಟು 126 ಕ್ಷೇತ್ರಗಳ ಪೈಕಿ 91 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com