

ಡೆಹರಾಡೂನ್/ನವದೆಹಲಿ: ಉತ್ತರಾಖಂಡ್ ನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಡಳಿತ ಹೇರಿರುವುದು 'ಅಸಂವಿಧಾನಿಕ' ಎಂದು ಕಟುವಾಗಿ ಟೀಕಿಸಿರುವ ಕಾಂಗ್ರೆಸ್, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಹೇಳಿದೆ.
ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಹೇರಿರುವುದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಇದೊಂದು ಪ್ರಜಾಪ್ರಭುತ್ವದ ಕಗ್ಗೊಲೆ. ರಾಷ್ಟ್ರಪತಿ ಆಡಳಿತ ಹೇರಿರುವ ಕೇಂದ್ರ ಸರ್ಕಾರಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವವಲ್ಲದ ಮತ್ತು ಅಸಂವಿಧಾನಿಕ ರೀತಿಯಲ್ಲಿ ಸಣ್ಣ ರಾಜ್ಯಗಳಲ್ಲಿನ ಸರ್ಕಾರವನ್ನು ಉರುಳಿಸುವುದು ಕೇಂದ್ರ ಸರ್ಕಾರದ ನಿಜವಾದ ಬಯಕೆಯಾಗಿದೆ ಎಂದು ಸಿಂಘ್ವಿ ಆರೋಪಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರ ವಿರುದ್ಧ 9 ಮಂದಿ ಕಾಂಗ್ರೆಸ್ ಶಾಸಕರು ಭಂಡಾಯದ ಬಾವುಟ ಹಾರಿಸಿದ್ದರು. ಈ ಸಂಬಂಧ ನಿನ್ನೆ ಸಂಪುಟ ಸಭೆಯಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಶಿಫಾರಸ್ಸು ಮಾಡಲಾಗಿತ್ತು. ಈ ಶಿಫಾರಸ್ಸಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅಧಿಕೃತ ಒಪ್ಪಿಗೆ ನೀಡಿದ್ದಾರೆ.