
ನವದೆಹಲಿ; ಲಾಹೋರ್ ನಲ್ಲಿ ಭಾನುವಾರ ಸಂಭವಿಸಿದ ಆತ್ಮಾಹುತಿ ದಾಳಿಯನ್ನು ಖಂಡಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಅವರಿಗೆ ಕರೆಮಾಡಿ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಈ ಕುರಿತಂತೆ ಟ್ವಿಟರ್ ನಲ್ಲಿ ಸ್ಪಷ್ಟನೆ ನೀಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ಅವರು, ಲಾಹೋರ್ ದಾಳಿ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ಅವರಿಗೆ ಕರೆ ಮಾಡಿದ್ದು, ಸಂಭಾಷಣೆ ವೇಳೆ ದಾಳಿ ಕುರಿತಂತೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗದಿರುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆಂದು ಹೇಳಿಕೊಂಡಿದ್ದಾರೆ.
ಇನ್ನು ಲಾಹೋರ್ ದಾಳಿ ಕುರಿತಂತೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಲಾಹೋರ್ ದಾಳಿ ಕುರಿತ ವಿಷಯ ತಿಳಿಯಿತು. ದಾಳಿಯನ್ನು ಖಂಡಿಸುತ್ತೇನೆ. ಸ್ಫೋಟದ ವೇಳೆ ಸಾವನ್ನಪ್ಪಿದ್ದ ಹಾಗೂ ಗಾಯಾಗೊಂಡ ಕುಟುಂಬಸ್ಥರಿಗೆ ಸಂತಾಪ ವ್ಯಕ್ತಪಡಿಸುತ್ತೇನೆ. ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆಂದು ಹೇಳಿದ್ದಾರೆ.
ಲಾಹೋರ್ ನ ಪ್ರಸಿತ್ಧ ತಾಣವೆಂದೇ ಹೇಳಲಾಗುವ ಇ-ಇಕ್ಬಾಲ್ ಪಾರ್ಕ್ ನಲ್ಲಿ ಪ್ರತೀ ನಿತ್ಯ ಹಲವು ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಜನನಿ ಬಿಡ ಪ್ರದೇಶಗಳನ್ನೇ ತಮ್ಮ ಗುರಿಯಾಗಿಸಿಕೊಳ್ಳುತ್ತಿರುವ ಉಗ್ರ ಸಂಘಟನೆಗಳು ನಿನ್ನೆ ಸಂಜೆ 6.30ರ ಸುಮಾರಿಗೆ ಆತ್ಮಾಹುತಿ ಬಾಂಬ್ ಸ್ಫೋಟಿಸಿತ್ತು. ಇದರ ಪರಿಣಾಮ ಸ್ಥಳದಲ್ಲಿದ್ದ 69ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, 300 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
Advertisement