
ನವದೆಹಲಿ: ಸಂಸತ್ ನ ಉಭಯ ಕಲಾಪಗಳಲ್ಲಿ ಕಾಂಗ್ರೆಸ್ ಪಕ್ಷದ ತೀವ್ರ ಮುಜುಗರಕ್ಕೆ ಕಾರಣವಾಗಿರುವ ಹೆಲಿಕಾಪ್ಚರ್ ಹಗರಣದಿಂದ ಪಾರಾಗಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್ ಪಕ್ಷ ಕೆಜಿ ಅನಿಲ ಬಾವಿ ಗುತ್ತಿಗೆಯಲ್ಲಿ ಗುಜರಾತ್ ಪೆಟ್ರೋಲಿಯಂ ಕಾರ್ಪೊ ರೇಶನ್ ಅವ್ಯವಹಾರ ಸಂಬಂಧ ಬಿಜೆಪಿಗೆ ತಿರುಗೇಟು ನೀಡಿದೆ.
ಸೋಮವಾರ ನಡೆದ ಸಂಸತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯರು ಈ ವಿಷಯ ಪ್ರಸ್ತಾಪಿಸಿ ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿದರು. ಕೆಜಿ ಅನಿಲ ಬಾವಿ ಗುತ್ತಿಗೆಯಲ್ಲಿ ಗುಜರಾತ್ ಪೆಟ್ರೋಲಿಯಂ ಕಾರ್ಪೊರೇಶನ್ ಅವ್ಯವಹಾರ ನಡೆಸಿದೆ ಎಂದು ಇತ್ತೀಚೆಗೆ ಸಿಎಜಿ ವರದಿ ನೀಡಿತ್ತು. ಸಂಸ್ಥೆಯಿಂದ 20 ಸಾವಿರ ಕೋಟಿ ರು. ಅವ್ಯವಹಾರ ನಡೆಸಿರುವ ಬಗ್ಗೆ ಸಿಎಜಿ ವರದಿಯಲ್ಲಿ ವಿವರಿಸಲಾಗಿತ್ತು. ಈ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಆದರೆ ಇದು ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಾಗಿದ್ದರಿಂದ, ಸಂಸತ್‌ನಲ್ಲಿ ಚರ್ಚೆ ನಡೆಸುವುದು ಸಾಧ್ಯವಿಲ್ಲ ಎಂದು ರಾಜ್ಯಸಭೆ ಉಪಸಭಾಪತಿ ಪಿ.ಜೆ.ಕುರಿಯನ್ ಹೇಳಿದ ಹಿನ್ನಲೆಯಲ್ಲಿ ಮತ್ತೆ ಕಾಂಗ್ರೆಸ್ ಮುಖಂಡರು ತೀವ್ರ ಪ್ರತಿಭಟನೆ ನಡೆಸಿದರು. ಇದರಿಂದ ಕಲಾಪವನ್ನು ಸ್ಪೀಕರ 3 ಬಾರಿ ಮುಂದೂಡಿದರು.
ಕಾಪ್ಟರ್ ಹಗರಣವನ್ನು ಮರೆಮಾಚಲು ಕಾಂಗ್ರೆಸ್ ತಂತ್ರ: ವೆಂಕಯ್ಯ ನಾಯ್ಡು
ಇನ್ನು ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ಕುರಿತಂತೆ ಮಾತನಾಡಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, "ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದಿಂದ ವಿಷಯಾಂತರ ಮಾಡಲು ಕಾಂಗ್ರೆಸ್ ಈ ತಂತ್ರ ಹೂಡಿದೆ ಎಂದು ಆರೋಪಿಸಿದ್ದಾರೆ. ನಾಯ್ಡು ಆರೋಪಕ್ಕೆ ಉತ್ತರಿಸಿರುವ ಕಾಂಗ್ರೆಸ್ ಕಾಪ್ಟರ್ ಪ್ರಕರಣದಲ್ಲಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದಕ್ಕೆಂದೇ ಕೆಲವೇ ಕಡತಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದೆ.
ಟಿಎಂಸಿ ಸಂಸದನಿಗೆ ನಿರ್ಬಂಧ
ಸಂಸತ್ ನ ಉಭಯ ಕಲಾಪಗಳಲ್ಲಿ ಹೆಲಿಕಾಪ್ಟರ್ ಹಗರಣ ಭಾರಿ ಕೋಲಾಹಲಕ್ಕೆ ಕಾರಣವಾಗಿರುವಂತೆಯೇ ಹಗರಣದಲ್ಲಿ ಲಂಚ ಪಡೆದಿದ್ದಾರೆ ಎಂದು ಹೇಳಲಾದ ‘ಗಾಂಧಿ’ ಮತ್ತು ‘ಎಪಿ’ ಯಾರು ಎಂಬುದನ್ನು ಸರ್ಕಾರ ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿ ಗಲಾಟೆ ಮಾಡಿದ ಟಿಎಂಸಿ ಸಂಸದ ಸುಖೇಂದು ರಾಯ್‌ಗೆ ಸಭಾಪತಿ ಹಮೀದ್ ಅನ್ಸಾರಿ ಒಂದು ದಿನ ನಿರ್ಬಂಧ ವಿಧಿಸಿದ್ದಾರೆ.
Advertisement