
ನವದೆಹಲಿ: ಬಹುಕೋಟಿ ವಿವಿಐಪಿ ಕಾಪ್ಟರ್ ಹಗರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳಿಗೆ ಮಹತ್ವದ ಸುಳಿವು ದೊರೆತಿದ್ದು, ಫಿನ್ ಮೆಕ್ಕಾನಿಕಾ ಸಂಸ್ಥೆಯ ಮಾಜಿ ಸಿಇಒ ಗೆಸಿಪ್ಪೋ ಓರ್ಸಿ ಹಗರಣದ ಕಿಕ್ ಬ್ಯಾಕ್ ಹಣವನ್ನು ಸುಸಜ್ಜಿತವಾಗಿ ತಲುಪಿಸಲು ಭಾರತ ಸೇರಿದಂತೆ ಮೂರು ರಾಷ್ಟ್ರಗಳಲ್ಲಿ ನಕಲಿ ಸಂಸ್ಥೆಗಳನ್ನು ಸ್ಥಾಪಿಸಲು ನೆರವಾಗಿದ್ದೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಮೂಲಗಳ ಪ್ರಕಾರ ಹೆಲಿಕಾಪ್ಟರ್ ಹಗರಣ ಸಂಬಂಧ 2009 ಫೆಬ್ರವರಿ 12ರಂದು ಓರ್ಸಿ ಏರ್ ಫ್ರಾನ್ಸ್ ವಿಮಾನದ ಮೂಲಕವಾಗಿ ಭಾರತಕ್ಕೆ ಆಗಮಿಸಿ ಸ್ವಿಸ್ ಮೂಲದ ಮಧ್ಯವರ್ತಿ ಗಿಡೋ ಹಶ್ಕೆಯೊಂದಿಗೆ ಕೆಲಕಾಲ ಭಾರತದಲ್ಲಿಯೇ ಕಳೆದಿದ್ದ. ಗಿಡೋ ಹಶ್ಕೆ ಕೂಡ ಲುಫ್ತಾನ್ಸಾ ವಿಮಾನದ ಮೂಲಕವಾಗಿ ದೆಹಲಿಗೆ ಆಗಮಿಸಿ ಅಲ್ಲೆ ಓರ್ಸಿಯನ್ನು ಭೇಟಿ ಮಾಡಿ ಒಪ್ಪಂದದ ಕುರಿತು ಚರ್ಚೆ ಮಾಡಿದ್ದ ಎಂದು ತಿಳಿದುಬಂದಿದೆ.
ಉನ್ನತ ಮೂಲಗಳ ಪ್ರಕಾರ ಪ್ರಸ್ತುತ ಕಾಪ್ಟರ್ ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಓರ್ಸಿ, ಒಪ್ಪಂದ ಸಂಬಂಧ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆಯಿಂದ ಪಡೆದ ಕಿಕ್ ಬ್ಯಾಕ್ ಹಣವನ್ನು ಭಾರತದ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ತಲುಪಿಸಲು ಭಾರತದಲ್ಲಿ ಹಲವು ನಕಲಿ ಸಂಸ್ಥೆಗಳನ್ನು ಸ್ಥಾಪಸಲು ಮಧ್ಯವರ್ತಿಗಳಿಗೆ ನೆರವಾಗಿದ್ದನಂತೆ. ಅಲ್ಲದೆ ಟ್ಯುನಿಷಿಯಾ ಮತ್ತು ಮಾರಿಷಸ್ ನಲ್ಲಿಯೂ ಕೆಲ ನಕಲಿ ಸಂಸ್ಥೆಗಳನ್ನು ಸ್ಥಾಪಿಸಿ ಆ ಸಂಸ್ಥೆಗಳ ಮೂಲಕವಾಗಿ ಲಂಚದ ಹಣವನ್ನು ಭಾರತೀಯ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ತಲುಪಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ಏರೋ ಮೆಟ್ರಿಕ್ಸ್ ಎಂಬ ನಕಲಿ ಸಂಸ್ಥೆಯನ್ನು ಸೇರುವ ಮುನ್ನ ಹಶ್ಕೆ ಮತ್ತೊಂದು ನಕಲಿ ಸಂಸ್ಥೆಯ ಸ್ಥಾಪನೆ ನಿರ್ಧರಿಸಿದ್ದ ಹಶ್ಕೆ, ಮಾಜಿ ವಾಯು ಸೇನಾ ಮುಖ್ಯಸ್ಥ ಎಸ್ ಪಿ ತ್ಯಾಗಿ ಅವರ ಸಹೋದರ ಸಂಬಂಧಿ ಸಂಜೀವ್ ತ್ಯಾಗಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದ ವಿಚಾರವನ್ನು ಸಿಬಿಐ ಮತ್ತು ಇಡಿ ತನಿಖೆ ಹೊರಹಾಕಿದೆ. 2009 ಫೆಬ್ರವರಿ 29ರಂದು ಏರೋಮೆಟ್ರಿಕ್ಸ್ ಸಂಸ್ಥೆಗೆ ಹಶ್ಕೆ ನಾಮನಿರ್ದೇಶನಗೊಂಡಿದ್ದರು. ಇನ್ನು ಕಿಕ್ ಬ್ಯಾಕ್ ಹಣದ ಕುರಿತು ಚರ್ಚಿಸಲು ಹಶ್ಕೆ ಮತ್ತು ಸಂಜೀವ್ ತ್ಯಾಗಿ ವಿದೇಶಕ್ಕೆ ಹಾರಿದ್ದ ವಿಚಾರವನ್ನು ಮತ್ತು 2009 ಸೆಪ್ಟೆಂಬರ್ 16ರಂದು ಲುಫ್ತಾನ್ಸಾ ಸಂಸ್ಥೆಯ ವಿಮಾನ ಸಂಖ್ಯೆ 762ರಲ್ಲಿ ಈ ಜೋಡಿ ಭಾರತಕ್ಕೆ ವಾಪಸಾಗಿದ್ದ ವಿಚಾರವನ್ನು ತನಿಖೆ ಹೊರಹಾಕಿದೆ.
ಕಿಕ್ ಬ್ಯಾಕ್ ಹಣ ಭಾರತಕ್ಕೆ ರವಾನೆಯಾಗುವದರಲ್ಲಿ ಓರ್ಸಿ ಪ್ರಮುಖ ಪಾತ್ರವಹಿಸಿದ್ದು, ಈ ಬಗ್ಗೆ ತನಿಖಾಧಿಕಾರಿಗಳಿಗೆ ಮಹತ್ವದ ದಾಖಲೆ ಲಭ್ಯವಾಗಿದೆ. ಕಿಕ್ ಬ್ಯಾಕ್ ಹಣ ವರ್ಗಾವಣೆಗಾಗಿಯೇ ಸ್ಥಾಪನೆಯಾದ ಐಡಿಎಸ್ ಮತ್ತು ಏರೋ ಮೆಟ್ರಿಕ್ಸ್ ಗಳನ್ನು ವಿಲೀನಗೊಳಿಸಲು 2009ರ ಅಂತ್ಯ ಮತ್ತು 2010ರ ಆರಂಭದಲ್ಲಿ ಮಧ್ಯವರ್ಥಿ ಹಶ್ಕೆ ನಿರ್ಧರಿಸಿದ್ದಾಗ ಓರ್ಸಿ ಮತ್ತೆ ಜನವರಿ 10 2010ರಂದು ಭಾರತಕ್ಕೆ ಬಂದಿದ್ದನಂತೆ. ಹೀಗೆ ಬಂದ ಓರ್ಸಿ ಸತತ ನಾಲ್ಕು ದಿನಗಳ ಬಳಿಕ ಅಂದರೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕಾಪ್ಚರ್ ಖರೀದಿ ಕುರಿತು ನಿರ್ಣಯ ಕೈಗೊಂಡ ಬಳಿಕವೇ ಭಾರತ ಬಿಟ್ಟಿದ್ದನಂತೆ.
ಇದಾದ ಬಳಿಕ ಕಾಪ್ಟರ್ ಒಪ್ಪಂದ ಮಾಡಿಕೊಂಡಿದ್ದ ಅಗಸ್ಟಾ ವೆಸ್ಟ್ ಲ್ಯಾಂಡ್ ಸಂಸ್ಥೆ ಬ್ರಿಟನ್ ಮೂಲದ ಮದ್ಯವರ್ತಿ ಮೈಕೆಲ್ ಸ್ಥಾಪಿಸಿದ್ದ ಗ್ಲೋಬಲ್ ಸರ್ವಿಸ್ ಎಫ್ ಜೆ ಇ ಸಂಸ್ಥೆಯೊಂದಿಗೆ ನಕಲಿ ಒಪ್ಪಂದವೊಂದನ್ನು ಮಾಡಿಕೊಂಡು ಅದರ ಮೂಲಕ ಹಣ ವರ್ಗಾವಣೆ ಮಾಡಿದ್ದ ವಿಚಾರವನ್ನು ಸಿಬಿಐ ಅಧಿಕಾರಿಗಳು ಹೊರಹಾಕಿದ್ದಾರೆ. ಮ್ಯೂನಿಚ್ ನಲ್ಲಿ ಸ್ಥಾಪನೆಯಾಗಿದ್ದ ನಕಲಿ ಸಂಸ್ಥೆ ಮೂಲಕವೂ ಕೋಟ್ಯಂತರ ಹಣ ಭಾರತಕ್ಕೆ ರವಾನೆಯಾಗಿದೆ ಎಂದು ತನಿಖಾಧಿಕಾರಿಗಳು ಬಹಿರಂಗ ಪಡಿಸಿದ್ದಾರೆ.
Advertisement