
ನವದೆಹಲಿ: ದೇಶದ ವಿವಿಧ ಬ್ಯಾಂಕುಗಳಿಂದ ಪಡೆದಿರುವ ಸಾಲದ ಹಣವನ್ನು ತೀರಿಸಲಾಗದೇ ದೇಶ ತೊರೆದಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ರಾಜ್ಯಸಭಾ ಸದಸ್ಯ ಸ್ಥಾನದಿಂದ ಉಚ್ಛಾಟನೆ ಮಾಡುವಂತೆ ರಾಜ್ಯಸಭೆಯ ಸದಾಚಾರ ಸಮಿತಿ ಸದನಕ್ಕೆ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯಸಭೆಯ ಸದಾಚಾರ ಸಮಿತಿ ಅಧ್ಯಕ್ಷ ಡಾ.ಕರಣ್ ಸಿಂಗ್ ಅವರು, "ಉಧ್ಯಮಿ ವಿಜಯ್ ಮಲ್ಯ ಅವರು ಎಸಗಿರುವ ಅಪರಾಧದ ಗಂಭೀರತೆಯನ್ನುಪರಿಗಣನೆಗೆ ತೆಗೆದುಕೊಂಡು ಅವರನ್ನು ಉಚ್ಛಾಟಿಸುವ ಶಿಫಾರಸು ಮಾಡಲಾಗಿದೆ. ವಿಜಯ್ ಮಲ್ಯ ಬರೆದಿರುವ ಪತ್ರ ಮತ್ತು ಅವರು ಕಳುಹಿಸಿರುವ ರಾಜೀನಾಮೆಯನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ನಿನ್ನೆ ನಡೆದ ಸಭೆಯಲ್ಲಿ ವಿಜಯ್ ಮಲ್ಯರನ್ನು ತಕ್ಷಣ ಉಚ್ಛಾಟಿಸುವಂತೆ ಶಿಫಾರಸು ಮಾಡಿದ್ದೇವೆ ಎಂದು ಸದಾಚಾರ ಸಮಿತಿಯ ಅಧ್ಯಕ್ಷ ಕರಣ್ ಸಿಂಗ್ ತಿಳಿಸಿದ್ದಾರೆ.
"ವಿಜಯ್ ಮಲ್ಯ ಉಚ್ಚಾಟನೆ ಪ್ರಕರಣದ ಮೂಲಕ ಸಂಸತ್ತಿನ ಘನತೆಗೆ ಮಸಿ ಬಳಿಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಸಂದೇಶ ಜನತೆಗೆ ರವಾನೆಯಾಗಲಿದೆ ಎಂದು ಕರಣ್ ಸಿಂಗ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಇನ್ನು ಸದಾಚಾರ ಸಮಿತಿ ಸಲ್ಲಿಸಿರುವ ಶಿಫಾರಸ್ಸನ್ನು ರಾಜ್ಯಸಭೆಯಲ್ಲಿ ಚರ್ಚಿಸಿ ಬಳಿಕ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಕರಣ್ ಸಿಂಗ್ ತಿಳಿಸಿದ್ದಾರೆ.
Advertisement