ಸರ್ಕಾರ ಕಾಂಗ್ರೆಸ್ ನಾಯಕರನ್ನು ತೇಜೋವಧೆ ಮಾಡಲು ಯತ್ನಿಸುತ್ತಿದೆ: ಅಭಿಷೇಕ್ ಸಿಂಘ್ವಿ

ಅಗಸ್ತವೆಸ್ಟ್ ಲ್ಯಾಂಡ್ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್...
ರಾಜ್ಯಸಭೆಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ
ರಾಜ್ಯಸಭೆಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ

ನವದೆಹಲಿ: ಅಗಸ್ತವೆಸ್ಟ್ ಲ್ಯಾಂಡ್ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ತನ್ನ ದುರಾಡಳಿತದಿಂದಾಗಿ ಭ್ರಮನಿರಸನಗೊಂಡಿರುವ ಕೇಂದ್ರ ಸರ್ಕಾರ ಪ್ರಚೋದಿತ ಆರೋಪಣೆ ಮತ್ತು ವ್ಯಂಗ್ಯೋಕ್ತಿ ಮೂಲಕ ಕಾಂಗ್ರೆಸ್ ನಾಯಕರ ತೇಜೋವಧೆ ಮಾಡಲು ಯತ್ನಿಸುತ್ತಿದೆ ಎಂದು ಆಪಾದಿಸಿದೆ.

ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಆಡಳಿತಾರೂಢ ಬಿಜೆಪಿ ಸದಸ್ಯರು ಮಾಡುತ್ತಿರುವ ಆರೋಪಕ್ಕೆ ರಾಜ್ಯಸಭೆಯಲ್ಲಿಂದು ಕಾಂಗ್ರೆಸ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಇದಕ್ಕೂ ಮುನ್ನ ಬಿಜೆಪಿ ಸದಸ್ಯ ಭೂಪೇಂದರ್ ಯಾದವ್ ಚರ್ಚೆ ಆರಂಭಿಸಿ, 12 ಅತಿ ಗಣ್ಯರ ಹೆಲಿಕಾಪ್ಟರ್ ಖರೀದಿ ಒಪ್ಪಂದದಲ್ಲಿ ಯುಪಿಎ ಸರ್ಕಾರದ ಪಾತ್ರವಿತ್ತು ಎಂದು ನೇರವಾಗಿ ಆರೋಪಿಸಿದರು. ಅದಕ್ಕೆ ಅಭಿಷೇಕ್ ಸಿಂಘ್ವಿ ಪ್ರತಿಕ್ರಿಯಿಸಿ, ಒಳ ದ್ವೇಷದಿಂದಾಗಿ ಬಿಜೆಪಿಯು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದೋಷಾರೋಪ ಮಾಡುತ್ತಿದೆ ಎಂದು ದೂರಿದರು.

ಹೆಲಿಕಾಪ್ಟರ್ ಖರೀದಿ ವಿವಾದಕ್ಕೆ ಕೊನೆ ಹಾಡದೆ ಅದನ್ನು ಹಾಗೆಯೇ ಕುದಿಯುತ್ತಿರುವಂತೆ ನೋಡಿಕೊಳ್ಳುವಲ್ಲಿ ಬಿಜೆಪಿ ಆಸಕ್ತಿ ಹೊಂದಿದೆ. ನಿಜವಾದ ಅಪರಾಧಿಗಳು ಯಾರು ಎಂದು ಕಂಡುಹಿಡಿಯುವಲ್ಲಿ ಅದು ಪ್ರಯತ್ನ ಮಾಡುತ್ತಿಲ್ಲ ಎಂದು ದೂರಿದರು.

ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಸೋನಿಯಾ ಗಾಂಧಿ ಪಾತ್ರದ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದು ಇಟಲಿ ಕೋರ್ಟ್ ಹೇಳಿದೆ. ಆದರೆ ಬಿಜೆಪಿ ಸಾಕ್ಷ್ಯಾಧಾರವಿಲ್ಲದೇ ಆರೋಪಿಸುತ್ತಿದೆ ಎಂದು ಸಹ ಹೇಳಿದ್ದಾರೆ.

ಆಗಸ್ಟಾ ವೆಸ್ಟ್ ಲ್ಯಾಂಡ್ ಖರೀದಿ ಹಗರಣದಲ್ಲಿ ಸೋನಿಯಾ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲ. ಕೇವಲ ಹೆಸರನ್ನಷ್ಟೇ ಉಲ್ಲೇಖಿಸಲಾಗಿದೆ. ಮನಮೋಹನ್ ಸಿಂಗ್ ಪಾತ್ರ ಕೂಡಾ ಹಗರಣದಲ್ಲಿ ಇಲ್ಲ. ಬೇರೆ ದೇಶದ ಕೋರ್ಟ್ ನೀಡಿದ ಆದೇಶದ ವರದಿಯನ್ನು ತರ್ಜುಮೆ ಮಾಡದೆ ನಾವು ನಂಬುತ್ತೇವೆ. ಆದರೆ ನಾವು ನಮ್ಮದೇ ದೇಶದ ಕೋರ್ಟ್ ನ್ನು ನಂಬೋದಿಲ್ಲ ಎಂದು ಸಿಂಘ್ವಿ ಹೇಳಿದರು.

ಅಷ್ಟೇ ಅಲ್ಲ ವರದಿಯಲ್ಲಿ ಎಪಿ ಎಂದು ಉಲ್ಲೇಖಿಸಿದ್ದನ್ನು ಅಹ್ಮದ್ ಪಟೇಲ್ ಎಂದು ಯಾಕೆ ಅರ್ಥ ಮಾಡಿಕೊಳ್ಳುತ್ತೀರಿ ಎಂದು ಸಿಂಘ್ವಿ ಬಿಜೆಪಿಗೆ ತಿರುಗೇಟು ನೀಡಿದರು.  ಎನ್ ಡಿಎ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಳಂಕಿತ, ಸುಳ್ಳು ಕಂಪನಿಗೆ 2015ರಲ್ಲಿ ಬೆಂಗಳೂರಲ್ಲಿ ನಡೆದ ಏರ್ ಶೋನವಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com