ತಂಬಾಕು ಉತ್ಪನ್ನಗಳ ಮೇಲೆ ಶೇ.85ರಷ್ಟು ಎಚ್ಚರಿಕೆ ಇರಲೇಬೇಕು: ಸುಪ್ರೀಂ ಕೋರ್ಟ್

ತಂಬಾಕು ಉತ್ಪನ್ನ ಪ್ಯಾಕೆಟ್‌ಗಳ ಮೇಲೆ ದೊಡ್ಡ ಗಾತ್ರದ ಶೇ.85ರಷ್ಟು ಎಚ್ಚರಿಕೆ ಸಂದೇಶ ಪ್ರಕಟಿಸುವುದು ಕಡ್ಡಾಯಮಾಡಲೇಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ..
ಸುಪ್ರೀಂಕೋರ್ಟ್ ಮತ್ತು ತಂಬಾಕು ಉತ್ಪನ್ನ (ಸಂಗ್ರಹ ಚಿತ್ರ)
ಸುಪ್ರೀಂಕೋರ್ಟ್ ಮತ್ತು ತಂಬಾಕು ಉತ್ಪನ್ನ (ಸಂಗ್ರಹ ಚಿತ್ರ)

ನವದೆಹಲಿ: ತಂಬಾಕು ಉತ್ಪನ್ನ ಪ್ಯಾಕೆಟ್‌ಗಳ ಮೇಲೆ ದೊಡ್ಡ ಗಾತ್ರದ ಶೇ.85ರಷ್ಟು ಎಚ್ಚರಿಕೆ ಸಂದೇಶ ಪ್ರಕಟಿಸುವುದು ಕಡ್ಡಾಯಮಾಡಲೇಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.

ತಂಬಾರು ಉತ್ಪನ್ನಗಳ ಪ್ಯಾಕೆಟ್ ಮೇಲೆ ಶೇ.85ರಷ್ಟು ಎಚ್ಚರಿಕೆ ಸಂದೇಶವಿರುವ ಚಿತ್ರವನ್ನು ಪ್ರಕಟಿಸಬೇಕು ಎಂಬ ಹೊಸ ನಿಯಮವನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂತೆಯೇ ಈ ಕುರಿತು ವಿವಿಧ ಹೈಕೋರ್ಟ್‌ಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಿ ತೀರ್ಮಾನ ತೆಗೆದುಕೊಳ್ಳಲು ಸೂಚಿಸಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ತಂಬಾಕು ನಿಯಂತ್ರಣ ಕಾಯ್ದೆ ನಿಯಮದಂತೆ ಸಿಗರೇಟ್ ಪ್ಯಾಕೆಟ್‌ಗಳ ಮೇಲೆ ಶೇ.85 ಎಚ್ಚರಿಕೆ ಸಂದೇಶ ಪ್ರಕಟಿಸಬೇಕು. ಈ ಹಿಂದೆ ಇದು ಶೇ.20ರಷ್ಟಿತ್ತು. ಎಚ್ಚರಿಕೆ ಸಂದೇಶ ಗಾತ್ರದ ಹೆಚ್ಚಳಕ್ಕೆ ವಿವಿಧ ತಂಬಾಕು ಉತ್ಪನ್ನ ಸಂಸ್ಥೆಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ತಂಬಾಕು ಕಂಪನಿಗಳು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಬುಧವಾರ ನಡೆಸಿದ ಸುಪ್ರೀಂ ಕೋರ್ಟ್, ತಂಬಾಕು ಉತ್ಪನ್ನಗಳ ಕುರಿತ ನೂತನ ನಿಯಮಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸುವಂತಿಲ್ಲ ಎಂದು ಹೇಳಿದೆ.

ಅಂತೆಯೇ ನೂತನ ನಿಯಮ ಜಾರಿಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ತಡೆ ನೀಡಿದ್ದನ್ನು ಪ್ರಸ್ತಾಪಿಸಿದ ಸುಪ್ರೀಂಕೋರ್ಟ್, ಕರ್ನಾಟಕ ಹೈಕೋರ್ಟ್‌ನ ಬೆಂಗಳೂರು ಪೀಠ ದೂರುಗಳ ವಿಚಾರಣೆ ನಡೆಸಿ ಅಂತಿಮ ನಿರ್ಧಾರ ನೀಡುವವರೆಗೂ ಯಾವುದೇ ನ್ಯಾಯಾಲಯ ನಿಯಮ ಜಾರಿಗೆ ತಡೆ ನೀಡುವಂತಿಲ್ಲ. ಎಲ್ಲಾ ಕಂಪನಿಗಳು ನೂತನ ನಿಯಮವನ್ನು ಪಾಲಿಸಲೇ ಬೇಕೆಂದು ಸುಪ್ರೀಂ ತಿಳಿಸಿದೆ. ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಬೇಕು ಎಂಬ ತಂಬಾಕು ಸಂಸ್ಥೆಗಳ ಅರ್ಜಿಯನ್ನು ತಿರಸ್ಕರಿಸಿದೆ.

ಇನ್ನು ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ತತ್ ಕ್ಷಣದಿಂದಲೇ ತಂಬಾಕು ತಯಾರಿಕಾ ಸಂಸ್ಥೆಗಳು ತಂಬಾಕು ಪ್ಯಾಕೆಟ್ ಗಳ ಮೇಲೆ ದೊಡ್ಡ ಗಾತ್ರದಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸುತ್ತವೆಯೇ ಎಂಬುದರ ಕುರಿತು ಈ ವರೆಗೂ ಯಾವುದೇ ಅಧಿಕೃತ ಹೇಳಿಕೆ ಹೊರಡಿಸಿಲ್ಲ.

ಕರ್ನಾಟಕ ಹೈಕೋರ್ಟ್ ಅಂಗಳಕ್ಕೆ ವಿವಿಧ ನ್ಯಾಯಾಲಯಗಳ ಅರ್ಜಿ
ನೂತನ ನಿಯಮ ವಿರೋಧಿಸಿ ದೆಹಲಿ, ಬಾಂಬೆ ಮತ್ತು ಗುಜರಾತ್ ಹೈಕೋರ್ಟ್‌ಗಳಲ್ಲಿ ತಂಬಾಕು ಸಂಸ್ಥೆಗಳು ಸಲ್ಲಿಸಿರುವ ದೂರುಗಳನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲು ಸುಪ್ರೀಂ ಸೂಚಿಸಿದೆ. 2008ರ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಪ್ಯಾಕೇಜಿಂಗ್ ಮತ್ತು ಲೇಬಲಿಂಗ್ ನಿಯಮದಲ್ಲಿ ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಿರುವ ಎಲ್ಲ ದೂರುಗಳನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಬೇಕು. ವರ್ಗಾವಣೆ 2 ವಾರಗಳೊಳಗಾಗಿ ನಡೆಯಬೇಕು ಮತ್ತು 8 ವಾರಗಳೊಳಗೆ ಪ್ರಕರಣದ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಅಂತೆಯೇ ವಿಚಾರಣೆಯನ್ನು ವಿಭಾಗೀಯ ಪೀಠ ಅಥವಾ ಏಕ ಸದಸ್ಯ ಪೀಠದಲ್ಲಿ ನಡೆಸಬೇಕೆ ಎಂಬ ಬಗ್ಗೆ ಕರ್ನಾಟಕ ಹೈಕೋರ್ಟ್ ನಿರ್ಧರಿಸಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com