ಮುಖ್ಯೋಪಾಧ್ಯಾಯಿನಿ ಮಗನ ಮದುವೆಗೆ ಶಾಲೆಗೆ ರಜೆ: ಶಿಕ್ಷಕರೆಲ್ಲರು ಸೇವೆಯಿಂದ ಅಮಾನತು

ಮಗನ ಮದುವೆಯೆಂದು ಶಾಲೆಯಲ್ಲಿ ಮಕ್ಕಳಿಗೆ ರಜೆ ನೀಡಿದ ಮುಖ್ಯೋಪಾಧ್ಯಾಯಿನಿ ಮತ್ತು ಸಾಮೂಹಿಕವಾಗಿ ರಜೆ ಹಾಕಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಮ್ಮು: ಮಗನ ಮದುವೆಯೆಂದು ಶಾಲೆಯಲ್ಲಿ ಮಕ್ಕಳಿಗೆ ರಜೆ ನೀಡಿದ ಮುಖ್ಯೋಪಾಧ್ಯಾಯಿನಿ ಮತ್ತು ಸಾಮೂಹಿಕವಾಗಿ ರಜೆ ಹಾಕಿ ಮದುವೆಗೆ ಹೋದ ಶಿಕ್ಷಕರನ್ನು ಶಿಕ್ಷಣ ಇಲಾಖೆ ಅಮಾನತುಗೊಳಿಸಿದ ಘಟನೆ ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದಿದೆ.

ದೋಡಾ ಜಿಲ್ಲೆಯ ಭರತ್ ಪ್ರದೇಶದ ಬಾಗ್ಲಾದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಎಲ್ಲಾ ಶಿಕ್ಷಕರನ್ನು ಅಮಾನತಿನಲ್ಲಿಡಲಾಗಿದೆ ಎಂದು ಜಮ್ಮುವಿನ ಶಿಕ್ಷಣ ಇಲಾಖೆ ನಿರ್ದೇಶಕಿ ಸಮಿತಾ ಸೇತಿ ತಿಳಿಸಿದ್ದಾರೆ.

ಶಾಲಾ ಮುಖ್ಯೋಪಾಧ್ಯಾಯಿನಿ ಸಯೀದಾ ಅಂಜುಮ್ ಅವರ ಮಗನ ವಿವಾಹ ಮೊನ್ನೆ ಮಂಗಳವಾರ ನೆರವೇರಿತ್ತು. ಶಿಕ್ಷಣ ಇಲಾಖೆಯ ಅನುಮತಿ ತೆಗೆದುಕೊಳ್ಳದೆ ಅಂದು ಮಕ್ಕಳಿಗೆ ರಜೆ ಘೋಷಿಸಲಾಗಿತ್ತು. ಇಲ್ಲಿ ಸುಮಾರು 300ಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಶಾಲೆಗೆ ರಜೆ ನೀಡಲಾಗಿದೆ ಎಂದು ಮುಖ್ಯೋಪಾಧ್ಯಾಯಿನಿ ಸಹಿ ಹಾಕಿದ ನೊಟೀಸನ್ನು ನೊಟೀಸ್ ಬೋರ್ಡ್ ನಲ್ಲಿ ನೇತು ಹಾಕಲಾಗಿತ್ತು. ಇದನ್ನು ಗಮನಿಸಿದ ಗ್ರಾಮದ ಸರ್ಪಂಚ್ ರಾಜ್ಯ ಶಿಕ್ಷಣ ಸಚಿವ ನಯೀಮ್ ಅಕ್ತರ್ ಅವರ ಗಮನಕ್ಕೆ ತಂದರು. ಸಚಿವರು ತನಿಖೆಗೆ ಆದೇಶ ನೀಡಿದರು.

''ನಮಗೆ ಸೂಚನೆ ಸಿಕ್ಕ ತಕ್ಷಣ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಶಾಲೆಗೆ ತೆರಳಿದರು. ಅಲ್ಲಿಗೆ ಹೋದಾಗ ಶಾಲೆ ಮುಚ್ಚಿತ್ತು ಮತ್ತು ರಜೆ ಘೋಷಿಸಿ ಮುಖ್ಯೋಪಾಧ್ಯಾಯಿನಿ ಸಹಿ ಇರುವ ನೊಟೀಸ್ ಬೋರ್ಡ್ ನಲ್ಲಿತ್ತು ಎಂದು ಸೇತಿ ತಿಳಿಸಿದ್ದಾರೆ.

ಮುಖ್ಯೋಪಾಧ್ಯಾಯಿನಿ, ಇತರ ಶಿಕ್ಷಕರು ಮತ್ತು ಸಿಬ್ಬಂದಿಗಳನ್ನು ಪ್ರಾಥಮಿಕ ತನಿಖೆ ನಡೆಸಿದಾಗ ಕರ್ತವ್ಯಲೋಪವೆಸಗಿರುವುದು ಕಂಡುಬಂದಿದೆ. ಹಾಗಾಗಿ ಅವರನ್ನು ಅಮಾನತಿನಲ್ಲಿಡಲಾಗಿದೆ. ಶಿಕ್ಷಕರ ವಿರುದ್ಧ ಆರೋಪಪಟ್ಟಿ ಸಲ್ಲಿಸಿ ಕಾನೂನಿನ ಪ್ರಕಾರ ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಮಿತಾ ಸೇತಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com