
ಡೆಹ್ರಾಡೂನ್: ಕೇಂದ್ರ ಸರ್ಕಾರ ಉತ್ತರಾಖಾಂಡ್ ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿರುವುದರಿಂದ ಹೊರಹಾಕಲಾಗಿರುವ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಬಂಡಾಯ ಎದ್ದ ಕಾಂಗ್ರೆಸ್ ಶಾಸಕರಿಗೆ ಲಂಚ ನೀಡಲು ಪ್ರಯತ್ನಿಸಿದ ಆರೋಪದ ಪ್ರಕರಣದಲ್ಲಿ, ಪ್ರಶ್ನೆಗಳಿಗೆ ಉತ್ತರಿಸಲು ಸಿಬಿಐ ಮುಂದೆ ಹಾಜರಾಗಲು ಸೋಮವಾರ ಹೆಚ್ಚಿನ ಸಮಯಾವಕಾಶವನ್ನು ಕೋರಿದ್ದಾರೆ.
"ನಮ್ಮ ತೊಂದರೆಗಳನ್ನು ಏಜೆನ್ಸಿ ಅರ್ಥ ಮಾಡಿಕೊಳ್ಳುತ್ತದೆ ಎಂದು ನಂಬಿದ್ದೇನೆ ಮತ್ತು ಹೆಚ್ಚಿನ ಸಮಯ ನೀಡುತ್ತದೆಂದು ಕೂಡ" ಎಂದು ಡೆಹ್ರಾಡೂನ್ ನಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
"ಸಿಬಿಐ ಮುಂದೆ ಹಾಜರಾಗಿ ಅವರು ಕೇಳುವ ಎಲ್ಲ ಮಾಹಿತಿಯನ್ನೂ ನೀಡಲಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದೇನೆ" ಎಂದು ಕೂಡ ಅವರು ತಿಳಿಸಿದ್ದಾರೆ.
ನಾರ್ಕೋ ಅನಲಿಸಿಸ್ ಪರೀಕ್ಷೆಗೂ ತಾವು ಸಿದ್ದ ಎಂದು ಹರೀಶ್ ರಾವತ್ ಹೇಳಿದ್ದಾರೆ.
೭೦ ಸದಸ್ಯರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಬಂಡಾಯವೆದ್ದಿರುವ ಕಾಂಗ್ರೆಸ್ ಶಾಸಕರಿಗೆ ರಾವತ್ ಲಂಚ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದ ವಿಡಿಯೋ ಪ್ರಕರಣದ ವಿಚಾರಣೆಯಲ್ಲಿ ರಾವತ್ ಅವರಿಗೆ ಸಿಬಿಐ ನೋಟಿಸ್ ನೀಡಿತ್ತು.
ಈ ವಿಡಿಯೋ ಚಿತ್ರೀಕರಣ ನಡೆಸಿದ್ದ ಉಮೇಶ್ ಕುಮಾರ್ ಅವರನ್ನು ಸಿಬಿಐ ಇದಕ್ಕೂ ಮುಂಚೆ ಪ್ರಶ್ನಿಸಿತ್ತು. ಈ ವಿಡಿಯೋ ಸಿಡಿ ನಿಜವಾದದ್ದು ಮತ್ತು ತಿರುಚಲಾಗಿಲ್ಲ ಎಂದು ವಿಧಿ ವಿಜ್ಞಾನ ಪರೀಕ್ಷೆ ಸ್ಪಷ್ಟಪಡಿಸಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
Advertisement