
ಬಾಲಸೋರ್: ಭಾರತದ ಅತ್ಯಂದ ದೂರಗಾಮಿ ಮತ್ತು ವಿಧ್ವಂಸಕ ಕ್ಷಿಪಣಿ ಎಂದೇ ಖ್ಯಾತಿಗಳಿಸಿರುವ ಅಗ್ನಿ-5 ಕ್ಷಿಪಣಿಯ ಪ್ರಯೋಗಾರ್ಥ ಪರೀಕ್ಷೆ ಪದೇ ಪದೇ ಮುಂದತಕ್ಕೆ ಹೋಗುತ್ತಿದ್ದು, ಇದೀಗ ಮಾರ್ಚ್ 6ರಂದು ನಡೆಯಬೇಕಿದ್ದ ಪರೀಕ್ಷೆ ಪ್ರಧಾನಿ ಮೋದಿ ಅವರ ಅನುಪಸ್ಥಿತಿಯಿಂದಾಗಿ ಮತ್ತೆ ಮುಂದೂಡಲ್ಪಟ್ಟಿದೆ.
ಇದೇ ಜೂನ್ 6ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಲಿರುವುದರಿಂದ ಉದ್ದೇಶಿತ ಅಗ್ನಿ-5 ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆಯನ್ನು ಮುಂದೂಡಲಾಗಿದೆ. ಡಿಆರ್ ಡಿಒದ ಮೂಲಗಳು ತಿಳಿಸಿರುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದಿಂದ ಭಾರತಕ್ಕೆ ವಾಪಸ್ ಆಗುತ್ತಿದ್ದಂತೆಯೇ ಅಗ್ನಿ-5 ಕ್ಷಿಪಣಿಯ ನಾಲ್ಕನೇ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ಅಗ್ನಿ-5 ಕ್ಷಿಪಣಿ ಪರೀಕ್ಷೆ ಕಳೆದ 6 ತಿಂಗಳಿನಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಮುಂದೂಡಲ್ಪಟ್ಟಿದ್ದು, ಈ ಹಿಂದೆ ಡಿಸೆಂಬರ್ ಮತ್ತು ಜನವರಿಯಲ್ಲಿ ಕ್ಷಿಪಣಿ ಪರೀಕ್ಷೆ ಸಿದ್ಧತೆ ನಡೆಸಲಾಗಿತ್ತು. ಆದರೆ ಕಾರಣಾಂತರಗಳಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಜನವರಿ ತಿಂಗಳ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಭೇಟಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಿಡುವಿಲ್ಲದ ಕಾರ್ಯಗಳಿಂದಾಗಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಕ್ಷಿಪಣಿ ಸಕಲ ರೀತಿಯಲ್ಲೂ ಪರೀಕ್ಷೆಗೆ ಸಿದ್ಧವಾಗಿದ್ದು, ಈಗಾಗಲೇ ಅಗ್ನಿ-5 ಕ್ಷಿಪಣಿ ಪರೀಕ್ಷೆಗೆ ಒಡಿಶಾದ ಬಾಲಸೋರ್ ನಲ್ಲಿ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಅಗ್ನಿ-5 ಕ್ಷಿಪಣಿ ಪರೀಕ್ಷೆಗೆ ಕೇಂದ್ರ ರಕ್ಷಣಾ ಇಲಾಖೆಯ ವತಿಯಿಂದ ಮತ್ತು ಕೇಂದ್ರ ವಿದೇಶಾಂಗ ಇಲಾಖೆಯಿಂದ ಈಗಾಗಲೇ ಗ್ರೀನ್ ಸಿಗ್ನಲ್ ದೊರೆತಿದ್ದು, ಪ್ರಧಾನ ಮಂತ್ರಿಗಳ ಕಾರ್ಯಾಲಯದಿಂದ ಇನ್ನಷ್ಟೇ ಅನುಮತಿ ಮತ್ತು ದಿನಾಂಕ ನಿಗದಿಯಾಗಬೇಕಿದೆ. ಹೀಗಾಗಿ ಡಿಆರ್ ಡಿಒ ಅಧಿಕಾರಿಗಳು ಈ ಬಗ್ಗೆ ಪ್ರಧಾನ ಮಂತ್ರಿಗಳ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅತ್ತ ಅನುಮತಿ ದೊರೆಯುತ್ತಿದ್ದಂತೆಯೇ ಇತ್ತ ಒಡಿಶಾದ ಬಾಲಸೋರ್ ನಲ್ಲಿ ಕ್ಷಿಪಣಿ ಪರೀಕ್ಷೆ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಿಪಣಿ ಪರೀಕ್ಷೆಗೆ ಹಾಜರಾಗುವ ಕುರಿತು ಅನುಮತಿ ದೊರೆಯುತ್ತಿದ್ದಂತೆಯೇ ಪರೀಕ್ಷಾ ದಿನಾಂಕವನ್ನು ಪ್ರಕಟಿಸಲಾಗುತ್ತದೆ ಎಂದು ಡಿಆರ್ ಡಿಒದ ಮೂಲಗಳು ತಿಳಿಸಿವೆ.
ಅಮೆರಿಕ ಪ್ರವಾಸದ ವೇಳೆ ಅಮೆರಿಕ ಕಾಂಗ್ರೆಸ್ ನೊಂದಿಗೆ ಜಂಟಿ ಕಲಾಪದಲ್ಲಿ ಪಾಲ್ಗೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು, ವಾಷಿಂಗ್ಟನ್ ನಲ್ಲಿ ನಡೆಯಲಿರುವ 41ನೇ ನಾಯಕತ್ವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಇದಾದ ಬಳಿಕ ಅಮೆರಿಕದ ವಾಣಿಜ್ಯೋಧ್ಯಮಿಗಳೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸುವ ಪ್ರಧಾನಿ ಮೋದಿ ಜೂನ್ 7ರಂದು ಅಮೆರಿಕ ಸರ್ಕಾರದ ಪ್ರತಿನಿಧಿಗಳೊಂದಿಗೆ ಧ್ವಿಪಕ್ಷೀಯ ಮತ್ತು ವಾಣಿಜ್ಯ ಕಾರ್ಯತಂತ್ರದ ಸಂಬಂಧಗಳ ಕುರಿತು ಚರ್ಚಿಸಲಿದ್ದಾರೆ. ಈ ಸಭೆಯ ಬಳಿಕ ನರೇಂದ್ರ ಮೋದಿ ಅವರು ಭಾರತಕ್ಕೆ ವಾಪಸಾಗಲಿದ್ದಾರೆ.
Advertisement