ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ನೆಹರು ಚರಿತ್ರೆಗೆ ಕೊಕ್

ದೇಶದ ಪ್ರಪ್ರಥಮ ಪ್ರಧಾನಿ ದಿವಂಗತ ಜವಹರ್ ಲಾಲ್ ನೆಹರು ಅವರ ಚರಿತ್ರೆಯನ್ನು ರಾಜಸ್ಥಾನದ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಕೈಬಿಟ್ಟಿರುವುದು...
ಜವಹರ್ ಲಾಲ್ ನೆಹರು
ಜವಹರ್ ಲಾಲ್ ನೆಹರು

ಜೈಪುರ:  ದೇಶದ ಪ್ರಪ್ರಥಮ ಪ್ರಧಾನಿ  ದಿವಂಗತ ಜವಹರ್ ಲಾಲ್ ನೆಹರು ಅವರ ಚರಿತ್ರೆಯನ್ನು ರಾಜಸ್ಥಾನದ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.

ದೇಶದ ನಾಯಕರ ಕುರಿತಾದ ಪಾಠದಲ್ಲಿ ಮಹಾತ್ಮಾ ಗಾಂಧಿ, ಸುಭಾಷ್​ಚಂದ್ರ ಬೋಸ್, ಸಾವರ್ಕರ್, ಭಗತ್ ಸಿಂಗ್ ಮತ್ತಿತರರ ಬಗ್ಗೆ ಪ್ರಸ್ತಾಪವಿದೆ. ಆದರೆ ನೆಹರು ಮತ್ತು ಇತರ ಪ್ರಮುಖ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಕೈಬಿಡಲಾಗಿದೆ.

ಪಠ್ಯಕ್ರಮದಲ್ಲಿ ನೆಹರು ಮತ್ತಿತರ ನಾಯಕರ ಹೆಸರು ಕೈಬಿಟ್ಟಿರು ವುದು ಬಿಜೆಪಿಯ ಕೇಸರೀಕರಣ ಯತ್ನದ ಭಾಗವಾಗಿದ್ದು, ಇತಿಹಾಸವನ್ನು ತಿರುಚಲಾಗಿದೆ ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಆರೋಪಿಸಿದ್ದಾರೆ

ಜತೆಗೆ ಗಾಂಧಿಯನ್ನು ಗೋಡ್ಸೆ ಹತ್ಯೆ ಮಾಡಿರುವ ಬಗ್ಗೆಯೂ ಉಲ್ಲೇಖವಿಲ್ಲ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪಠ್ಯಕ್ರಮವನ್ನು ಪರಿಷ್ಕರಿಸುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ. ನೂತನ ಪುಸ್ತಕ ಇನ್ನೂ ಮಾರುಕಟ್ಟೆಗೆ ಪ್ರವೇಶಿಸಿಲ್ಲ. ರಾಜಸ್ಥಾನ್ ರಾಜ್ಯ ಪಠ್ಯಪುಸ್ತಕ ಮಂಡಳಿ ವೆಬ್​ಸೈಟ್​ನಲ್ಲಿ ನೂತನ ಪಠ್ಯಕ್ರಮ ಪ್ರಕಟಿಸಿದೆ.

ಹಿಂದೆ ಇದ್ದ ಪಠ್ಯಕ್ರಮದಲ್ಲಿ ರಾಷ್ಟ್ರೀಯ ಚಳವಳಿ, ನೆಹರು ಪಾತ್ರ, ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭ, ನೂತನ ಸರ್ಕಾರ ರಚನೆ, ಸರ್ದಾರ್ ಪಟೇಲ್ ಕೊಡುಗೆ ಮತ್ತಿತರ ಅಂಶಗಳಿದ್ದವು. ಆದರೆ ಹೊಸ ಪಠ್ಯಕ್ರಮದಲ್ಲಿ ದೇಶದ ಮೊದಲ ಪ್ರಧಾನಿ ಹೆಸರಿನ ಜತೆಗೆ ಸರೋಜಿನಿ ನಾಯ್ಡು, ಮದನ ಮೋಹನ ಮಾಳವೀಯ ಮತ್ತಿತರ ನಾಯಕರ ಹೆಸರನ್ನೂ ಕೈಬಿಡಲಾಗಿದೆ.

ಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್, ಭಾರತದ ಏಕತೆಗೆ ಸರ್ದಾರ್ ಪಟೇಲ್ ಕೊಡುಗೆಯ ಕುರಿತು ವಿಸ್ತಾರವಾದ ಪಾಠ ನೀಡಲಾಗಿದೆ.

 ಪಠ್ಯಕ್ರಮ ರೂಪಿಸುವಲ್ಲಿ ಸರ್ಕಾರದ ಪಾತ್ರವಿಲ್ಲ. ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ಇದನ್ನು ರೂಪಿಸಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ವಾಸುದೇವ ದೇವ್​ನಾನಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com