
ನವದೆಹಲಿ: ಮಹತ್ತರ ಬೆಳವಣಿಗೆಯೊಂದರಲ್ಲಿ ಕಾಲ್ ಡ್ರಾಪ್ ಪ್ರಕರಣದಲ್ಲಿ ದೂರವಾಣಿ ನಿರ್ವಾಹಕ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ದೊಡ್ಡ ರಿಲೀಫ್ ನೀಡಿದ್ದು, ಕಾಲ್ ಡ್ರಾಪ್ ಗೆ ಪರಿಹಾರ ನೀಡುವಂತಿಲ್ಲ ಎಂದು ಬುಧವಾರ ತೀರ್ಪು ನೀಡಿದೆ.
ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ವು 2015ರ ಅಕ್ಟೋಬರ್ 16ರಂದು ಪ್ರತಿದಿನದ ಮೊದಲ ಮೂರು ಕರೆಗಳಿಗೆ ಕಾಲ್ ಡ್ರಾಪ್ ಆದರೆ ಸಂಬಂಧ ಪಟ್ಟ ದೂರವಾಣಿ ನಿರ್ವಾಹಕ ಸಂಸ್ಥೆ 1 ರು.ವನ್ನು ಗ್ರಾಹಕರಿಗೆ ಪರಿಹಾರವಾಗಿ ನಿಡಬೇಕೆಂದು ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ದೂರವಾಣಿ ನಿರ್ವಾಹಕ ಸಂಸ್ಥೆಗಳು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದವು. ಆದರೆ ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಫೆಬ್ರವರಿ 29ರಂದು ಟ್ರಾಯ್ ಆದೇಶವನ್ನು ಎತ್ತಿ ಹಿಡಿಯಿತು.
ಇದರಿಂದ ತೀವ್ರ ಮುಖಂಭಂಗ ಅನುಭವಿಸಿದ ಟೆಲಿಕಾಂ ಸಂಸ್ಥೆಗಳು ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮತ್ತೆ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದವು. ಎತ್ತಿ ಹಿಡಿದ ನಂತರ ದೂರವಾಣಿ ನಿರ್ವಾಹಕ ಸಂಸ್ಥೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸತತ ವಾದಗಳನ್ನು ಆಲಿಸಿದ ಬಳಿಕ ಇಂದು ತೀರ್ಪು ನೀಡಿದ್ದು, ಕಾಲ್ ಡ್ರಾಪ್ ಗೆ ಪರಿಹಾರ ಕೇಳುವಂತಿಲ್ಲ ಎಂದು ತನ್ನ ತೀರ್ಪು ನೀಡಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಮತ್ತು ಆರ್ ಎಫ್ ನಾರಿಮನ್ ನೇತೃತ್ವದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದ್ದು, ಕಾಲ್ ಡ್ರಾಪ್ ಗೆ ಟೆಲಿಕಾಂ ಸಂಸ್ಥೆಗಳ ಮೇಲೆ ಟ್ರಾಯ್ ವಿಧಿಸುತ್ತಿರುವ ನಿಯಂತ್ರಣ ಅನಿಯಂತ್ರಿತ ಮತ್ತು ಅವಿವೇಕದ ಕ್ರಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಏರ್ ಟೆಲ್ ಮತ್ತು ರಿಲಯನ್ಸ್ ನೇತೃತ್ವದಲ್ಲಿ ವಿವಿಧ ಟೆಲಿಕಾಂ ಸಂಸ್ಥೆಗಳು ಸುಪ್ರೀಂ ಕೋರ್ಟ್ ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದವು.
Advertisement