ಮಲ್ಯ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಆರಂಭ

ಭಾರತೀಯ ಬ್ಯಾಂಕ್‌ಗಳಿಂದ ಸಾಲ ಪಡೆದು ಅದನ್ನು ತೀರಿಸಲಾಗದೇ ವಂಚಿಸಿ ಲಂಡನ್‌ ಗೆ ಪರಾರಿಯಾಗಿರುವ ಮದ್ಯದ ದೊರೆ ಉದ್ಯಮಿ ವಿಜಯ್ ಮಲ್ಯಗೆ ಸೇರಿದ ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೆ ಬುಧವಾರ ಕೇಂದ್ರ ಸರ್ಕಾರ ಚಾಲನೆ ನೀಡಿದೆ.
ವಿಜಯ್ ಮಲ್ಯ (ಸಂಗ್ರಹ ಚಿತ್ರ)
ವಿಜಯ್ ಮಲ್ಯ (ಸಂಗ್ರಹ ಚಿತ್ರ)

ನವದೆಹಲಿ: ಭಾರತೀಯ ಬ್ಯಾಂಕ್‌ಗಳಿಂದ ಸಾಲ ಪಡೆದು ಅದನ್ನು ತೀರಿಸಲಾಗದೇ ವಂಚಿಸಿ ಲಂಡನ್‌ ಗೆ ಪರಾರಿಯಾಗಿರುವ ಮದ್ಯದ ದೊರೆ ಉದ್ಯಮಿ ವಿಜಯ್ ಮಲ್ಯಗೆ ಸೇರಿದ  ಆಸ್ತಿ-ಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೆ ಬುಧವಾರ ಕೇಂದ್ರ ಸರ್ಕಾರ ಚಾಲನೆ ನೀಡಿದೆ.

ಭಾರತಕ್ಕೆ ವಾಪಸಾಗಿ ವಿಚಾರಣೆ ಎದುರಿಸುವಂತೆ ಕೇಂದ್ರ ಸರ್ಕಾರದ ಒತ್ತಡವಿದ್ದರೂ, ಲಂಡನ್ ನಲ್ಲಿ ವಿಲಾಸಿ ಜೀವನ ನಡೆಸುತ್ತಿರುವ ವಿಜಯಮಲ್ಯಗೆ ಜಾರಿ ನಿರ್ದೇಶನಾಲಯ ಶಾಕ್  ನೀಡಿದ್ದು, ಐಡಿಬಿಐ ಬ್ಯಾಂಕ್‌ನಿಂದ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆಂದು ಪಡೆದಿದ್ದ 9,000 ಕೋಟಿ ರು. ಸಾಲವನ್ನು  ವಿಜಯ್ ಮಲ್ಯ ವಿದೇಶಗಳಲ್ಲಿ ಆಸ್ತಿ ಖರೀದಿಗೆ ಬಳಸಿದ ಆರೋಪದ ಮೇರೆಗೆ  ಅವರ ಆಸ್ತಿ-ಪಾಸ್ತಿ ಮತ್ತು ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ಮುಂದಾಗಿದೆ. ಇದರ ಮೊದಲ ಭಾಗವಾಗಿ ಈಗಾಗಲೇ ಜಾರಿ ನಿರ್ದೇಶನಾಲದ ಅಧಿಕಾರಿಗಳು  ಮಲ್ಯ ಅವರ ಆಸ್ತಿ ಗುರುತಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಈ ಕುರಿತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ‘ಅಕ್ರಮ ಹಣಕಾಸು ಚಟುವಟಿಕೆ ತಡೆ ಕಾಯ್ದೆ ಅನ್ವಯ 9,000 ಕೋಟಿ ರು. ಮೌಲ್ಯದ ಆಸ್ತಿ  ಮುಟ್ಟುಗೋಲು ಹಾಕಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಲುವಾಗಿ ಆಸ್ತಿ ಗುರುತಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಈ ವಿಷಯವನ್ನು ಮಾರುಕಟ್ಟೆ ನಿಯಂತ್ರಕ ಸೆಬಿಗೂ ತಿಳಿಸಲಾಗುವುದು’  ಎಂದು ಹೇಳಿದ್ದಾರೆ.

ಇನ್ನು ಉದ್ಯಮಿ ಮಲ್ಯ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಬ್ರಿಟನ್‌ನಿಂದ ಗಡಿಪಾರು ಮಾಡುವ ಪ್ರಕ್ರಿಯೆ ಮತ್ತೆ ಆರಂಭವಾಗಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.  ಬುಧವಾರ ರಾಜ್ಯಸಭೆಯಲ್ಲಿ ವಿವರಣೆ ನೀಡಿದ ಜೇಟ್ಲಿ ಅವರು,  ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಗಡಿಪಾರು ಮಾಡುವಂತೆ ಮತ್ತೊಮ್ಮೆ ಬ್ರಿಟನ್ ಎದುರು ಬೇಡಿಕೆ ಮುಂದಿಡಲಾಗುವುದು ಎಂದು  ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com