ಕೇಜ್ರಿವಾಲ್ ಸರ್ಕಾರದಿಂದ ಪತ್ರಿಕಾ ಜಾಹಿರಾತಿಗಾಗಿ ದಿನವೊಂದಕ್ಕೆ 16 ಲಕ್ಷ ರೂ. ವ್ಯಯ!

ದೆಹಲಿಯ ಸರ್ಕಾರ ಪತ್ರಿಕಾ ಜಾಹಿರಾತುಗಳಿಗಾಗಿ ದಿನವೊಂದಕ್ಕೆ 16 ಲಕ್ಷ ರೂ ಖರ್ಚು ಮಾಡುತ್ತಿದೆ ಎಂಬ ಮಾಹಿತಿ ಆರ್ ಟಿಐ ನಿಂದ ತಿಳಿದುಬಂದಿದೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿಯ ಸರ್ಕಾರ ಪತ್ರಿಕಾ ಜಾಹಿರಾತುಗಳಿಗಾಗಿ ದಿನವೊಂದಕ್ಕೆ 16 ಲಕ್ಷ ರೂ ಖರ್ಚು ಮಾಡುತ್ತಿದೆ ಎಂಬ ಮಾಹಿತಿ ಆರ್ ಟಿಐ ನಿಂದ ತಿಳಿದುಬಂದಿದೆ.

ಸಮ- ಬೆಸ ಸಂಖ್ಯೆ ವಾಹನ ಸಂಚಾರ ನಿಯಮ ಹಾಗೂ ದೆಹಲಿ ಸರ್ಕಾರದ ಇತರ ಯೋಜನೆಗಳ ಯಶಸ್ಸಿನ ಬಗ್ಗೆ ಪ್ರಚಾರ ಪಡೆಯುವುದಕ್ಕಾಗಿ ಕೇಜ್ರಿವಾಲ್ ಸರ್ಕಾರ ಕೇವಲ ಪತ್ರಿಕಾ ಜಾಹಿರಾತುಗಳಿಗೆ ದಿನವೊಂದಕ್ಕೆ 16 ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದು ಕಳೆದ 91 ದಿನಗಳಲ್ಲಿ ಬರೋಬ್ಬರಿ 14 .45 ಕೋಟಿ ರೂಪಾಯಿಗಳನ್ನು ಪತ್ರಿಕಾ ಜಾಹಿರಾತುಗಳಿಗಾಗಿಯೇ ವ್ಯಯಿಸಿದೆ.

ಕರ್ನಾಟಕ ಹಾಗಿ ಕೇರಳದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ಕನ್ನಡ, ಮಲಯಾಳಂ ಪತ್ರಿಕೆಗಳು ಕೇಜ್ರಿವಾಲ್ ಸರ್ಕಾರದಿಂದ ಹಣ ಪಡೆದು ಜಾಹಿರಾತು ಪ್ರಕಟಿಸಿವೆ ಎಂದು ಆರ್ ಟಿಐ ಪ್ರಶ್ನೆಗೆ ಬಂದಿರುವ ಉತ್ತರದಲ್ಲಿ ತಿಳಿಸಲಾಗಿದೆ. ಇನ್ನು ಲೋಕಸಭೆಗೆ ನೀಡಿರುವ ಉತ್ತರದಲ್ಲಿ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಎರಡು ಹಂತಗಳಲ್ಲಿ ಜಾರಿಗೆ ತರಲಾಗಿದ್ದ ಸಮ- ಬೆಸ ಸಂಖ್ಯೆ ವಾಹನ ಸಂಚಾರ ನಿಯಮ ಯೋಜನೆಗೆ ಪ್ರಚಾರ ನೀಡಲು 5 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದೆ.

ಅಧಿಕಾರಕ್ಕೆ ಬಂದ ಮೊದಲನೇ ವರ್ಷದಲ್ಲೇ ಆಮ್ ಆದ್ಮಿ ಪಕ್ಷ ಜಾಹಿರಾತಿಗಾಗಿ 80 ಕೋಟಿ ಖರ್ಚು ಮಾಡಿತ್ತು. ಅಷ್ಟೇ ಅಲ್ಲದೆ ಸರ್ಕಾರದ ಬಜೆಟ್ ನಲ್ಲಿ 500 ಕೋಟಿ ರೂಪಾಯಿಯಷ್ಟು ಹಣ ವನ್ನು ಜಾಹಿರಾತಿಗಾಗಿಯೇ ನೀಡಿತ್ತು. ದೆಹಲಿ ಹೊರತಾಗಿಯೂ ಚೆನ್ನೈ, ಹೈದರಾಬಾದ್, ಬೆಂಗಳೂರುಗಳಲ್ಲಿ ದೆಹಲಿ ಸರ್ಕಾರದ ಜಾಹಿರಾತು ಪ್ರಕಟವಾಗುವುದರಿಂದ ದೆಹಲಿ ಜನತೆಗೆ ಏನು ಲಾಭ, ದೆಹಲಿಯ ಜನರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿದೆ. ಸ್ವಚ್ಛತಾ ಕರ್ಮಚಾರಿಗಳಿಗೆ( ಪೌರ ಕಾರ್ಮಿಕರು) ವೇತನ ನೀಡಲು ದುಡ್ಡಿಲ್ಲದೇ ಹೋದರೂ ಜಾಹಿರಾತುಗಳಿಗೆ ದೆಹಲಿ ಸರ್ಕಾರ ಖರ್ಚು ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com