ಭಾರತದ ಸ್ವದೇಶಿ ನಿರ್ಮಿತ ಐದು ಹೆಮ್ಮೆಯ ರಕ್ಷಣಾ ಪರಿಕರಗಳು ರಫ್ತಿಗೆ ಸಿದ್ದ!

ರಕ್ಷಣಾ ವಲಯದಲ್ಲಿ ಇಡೀ ವಿಶ್ವವೇ ಬೆರಗಾಗುವ ಸಾಧನೆ ಗೈಯ್ಯುತ್ತಿರುವ ಭಾರತೀಯ ವಿಜ್ಞಾನಿಗಳ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗುತ್ತಿದ್ದು, ಭಾರತ ಇನ್ನು ಮುಂದೆ ತನ್ನದೇ ತಂತ್ರಜ್ಞಾನದ ಆಧುನಿಕ ಶಸ್ತ್ರಾಸ್ತ್ರಗಳನ್ನು ವಿದೇಶಗಳಿಗೆ ರಫ್ತು ಮಾಡಲು ಸಿದ್ಧತೆ ನಡೆಸಿದೆ.
ಭಾರತದ 5 ಹೆಮ್ಮೆಯ ರಕ್ಷಣಾ ಪರಿಕರಗಳು
ಭಾರತದ 5 ಹೆಮ್ಮೆಯ ರಕ್ಷಣಾ ಪರಿಕರಗಳು

ನವದೆಹಲಿ: ರಕ್ಷಣಾ ವಲಯದಲ್ಲಿ ಇಡೀ ವಿಶ್ವವೇ ಬೆರಗಾಗುವ ಸಾಧನೆ ಗೈಯ್ಯುತ್ತಿರುವ ಭಾರತೀಯ ವಿಜ್ಞಾನಿಗಳ ಸಾಧನೆಗೆ ಮತ್ತೊಂದು ಗರಿ ಸೇರ್ಪಡೆಯಾಗುತ್ತಿದ್ದು, ಇಷ್ಟು ದಿನ ವಿದೇಶಗಳಿಂದ  ರಕ್ಷಣಾ ಪರಿಕರಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಇನ್ನು ಮುಂದೆ ತನ್ನದೇ ತಂತ್ರಜ್ಞಾನದ ಆಧುನಿಕ ಶಸ್ತ್ರಾಸ್ತ್ರಗಳನ್ನು ವಿದೇಶಗಳಿಗೆ ರಫ್ತು ಮಾಡಲು ಸಿದ್ಧತೆ ನಡೆಸಿದೆ.

ಸ್ವದೇಶಿ ನಿರ್ಮಿತ ರಕ್ಷಣಾ ಪರಿಕರಗಳನ್ನು ಈಗಾಗಲೇ ಭಾರತ ವಿದೇಶಗಳಿಗೆ ರಫ್ತು ಮಾಡುತ್ತಿದೆಯಾದರೂ, ಈ ಪ್ರಮಾಣವನ್ನು ಇದೀಗ ಭಾರಿ ಪ್ರಮಾಣಕ್ಕೆ ಏರಿಸಲು ಸಿದ್ಧತೆ ನಡೆಸಲಾಗುತ್ತಿದೆ.  ಈ ಬಗ್ಗೆ ಈ ಹಿಂದೆ ಸಾಕಷ್ಚು ಬಾರಿ ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಈಗಿರುವ ಪ್ರಸ್ತುತ ಪ್ರಮಾಣಕ್ಕಿಂತ ಇನ್ನೂ ಹೆಚ್ಚಿನ  ಪ್ರಮಾಣದಲ್ಲಿ ರಕ್ಷಣಾ ಪರಿಕರ ರಫ್ತು ಪ್ರಕ್ರಿಯೆ ನಡೆಯಬೇಕು ಎಂದು ಹೇಳಿದ್ದರು. ಪ್ರಸ್ತುತ ಭಾರತ ವಿದೇಶಗಳಿಗೆ ಸುಮಾರು 300 ಮಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ಪರಿಕರಗಳನ್ನು ರಫ್ಕು  ಮಾಡುತ್ತಿದ್ದು, ಈ ಪ್ರಮಾಣವನ್ನು 2 ಬಿಲಿಯನ್ ಡಾಲರ್ ಗೆ ಏರಿಸಬೇಕು ಎನ್ನುವುದು ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಅವರ ಆಶಯವಾಗಿದೆ.

ಇದೇ ಕಾರಣಕ್ಕಾಗಿ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಕ್ರಮ ಕೈಗೊಂಡಿದ್ದ ಕೇಂದ್ರ ರಕ್ಷಣಾ ಇಲಾಖೆ ಸ್ವದೇಶಿ ತಂತ್ರಜ್ಞಾನದ ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿತ್ತು.  ಇದೀಗ ಅದರ ಫಲ ನಿಧಾನವಾಗಿ ಗೋಚರಿಸುತ್ತಿದ್ದು, ಭಾರತದ ಸ್ವದೇಶಿ ನಿರ್ಮಿತ ಐದು ಪ್ರಮುಖ ಶಸ್ತ್ರಾಸ್ತ್ರಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ.  ಪ್ರಮುಖವಾಗಿ ಉಗ್ರರ ಮತ್ತು ಬೇಟೆಗಾರರ ಹಾವಳಿ ಇರುವ ಆಫ್ರಿಕನ್ ದೇಶಗಳು, ಲ್ಯಾಟಿನ್ ಅಮೆರಿಕ ದೇಶಗಳು ಸೇರಿದಂತೆ ನಮ್ಮ ಪಕ್ಕದಲ್ಲೇ ಇರುವ ಶ್ರೀಲಂಕಾ ದೇಶ ಕೂಡ ಭಾರತದ  ಶಸ್ತ್ರಾಸ್ತ್ರಗಳ ಖರೀದಿಗೆ ಒಲವು ತೋರಿದೆ.

ವಿಶ್ವದ ಗಮನ ಸೆಳೆದಿರುವ ಆ ಐದು ರಕ್ಷಣಾ ಪರಿಕರಗಳ ವಿವರ ಇಲ್ಲಿದೆ.
ಎಲ್ ಸಿಹೆಚ್ (ಲಘು ಸಮರ ಹೆಲಿಕಾಪ್ಟರ್)


ಭಾರತದ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ಸಂಸ್ಥೆ ತಯಾರಿಸಿರುವ ಎಲ್ ಸಿಹೆಚ್ ಲಘು ಯುದ್ಧ ಹೆಲಿಕಾಪ್ಟರ್ ಗಳಿಗಾಗಿ ಆಫ್ರಿಕಾ ಖಂಡದ ವಿವಿಧ ದೇಶಗಳು ಬೇಡಿಕೆ ಸಲ್ಲಿಸಿವೆ.  ಸುಮಾರು 5.5 ಟನ್ ತೂಕದ ಎಲ್ ಸಿಹೆಚ್ ಗಾತ್ರದಲ್ಲಿ ಚಿಕ್ಕದಾದರೂ, ವೇಗ ಮತ್ತು ಸಾಮರ್ಥ್ಯದಲ್ಲಿ ದೊಡ್ಡ-ದೊಡ್ಡ ಹೆಲಿಕಾಪ್ಟರ್ ಗಳಿಗೆ ಸವಾಲೊಡ್ಡಬಹುದು. ಆಫ್ರಿಕಾದಂತ ದಟ್ಟ ಕಾನನಗಳಲ್ಲಿ  ಬೇಕೆಂದ ಪ್ರದೇಶದಲ್ಲಿ ಇಳಿಸಬಹುದಾಗಿರುವುದರಿಂದಲೇ ಆಫ್ರಿಕನ್ ದೇಶಗಳು ಬೇಟೆಗಾರರ ಮತ್ತು ಉಗ್ರರ ವಿರುದ್ಧ ಕಾರ್ಯಾಚರಣೆಗೆ ಈ ಲಘು ಯುದ್ಧ ಹೆಲಿಕಾಪ್ಟರ್ ಗಳಿಗಾಗಿ ಬೇಡಿಕೆ  ಸಲ್ಲಿಸಿವೆ. 16ರಿಂದ 18 ಸಾವಿರ ಅಡಿ ಎತ್ತರದಲ್ಲಿ ಹಾರುವ ಸಾಮರ್ಥ್ಯ, ಗುಂಡುನಿರೋಧಕ ರಕ್ಷಾಕವಚ, ಸ್ವಯಂ ಮುಚ್ಚಿಕೊಳ್ಳುವ ಇಂಧನ ಟ್ಯಾಂಕ್ ವ್ಯವಸ್ಥೆ, ಗಂಟೆಗೆ 275 ಕಿ.ಮೀ ವೇಗದಲ್ಲಿ  ಚಲಿಸುವ ಈ ಎಲ್ ಸಿಹೆಚ್ ಕಾಪ್ಟರ್ ಗಳು ತನ್ನ ವೇಗದಿಂದ ಶತ್ರುಗಳ ಕಣ್ತಪ್ಪಿಸಿ ಕ್ಷಣಾರ್ಧದದಲ್ಲಿ ಮಾಯವಾಗುವ ಸಾಮರ್ಥ್ಯ ಎಲ್ ಸಿಹೆಚ್ ಲಘುಯುದ್ಧ ಹೆಲಿಕಾಪ್ಟರ್ ಗಳಿಗಿದೆ. ಇಂತಹ  ಲಕ್ಷಣಗಳಿಂದಲೇ ಇದೀಗ ಎಲ್ ಸಿಹೆಚ್ ಹೆಲಿಕಾಪ್ಟರ್  ಗಳು ವಿಶ್ವದ ನಾನಾ ದೇಶಗಳ ಗಮನ ಸೆಳೆದಿದೆ.

ಬ್ರಹ್ಮೋಸ್ ಕ್ಷಿಪಣಿಗಳು


ಭಾರತದ ವಿಜ್ಞಾನಿಗಳ ಹೆಮ್ಮೆಯ ಸಂಶೋಧನೆ ಬ್ರಹ್ಮೋಸ್ ಕ್ಷಿಪಣಿಗಳು. ಭಾರತ ಮತ್ತು ರಷ್ಯಾ ದೇಶಗಳ ಜಂಟಿ ಸಂಶೋಧನೆಯ ಫಲವಾದ ಬ್ರಹ್ಮೋಸ್ ಕ್ಷಿಪಣಿಗೂ ಅಂತಾರಾಷ್ಟ್ರೀಯ  ಮಾರುತಟ್ಟೆಯಲ್ಲಿ ಭಾರಿ ಬೇಡಿಕೆ ಕಂಡುಬಂದಿದ್ದು, ಅರ್ಜೆಂಟೀನಾ, ವೆನುಜುವೆಲಾ, ಚಿಲಿ ಮತ್ತು ಬ್ರೆಜಿಲ್ ನಂತಹ ಲ್ಯಾಟಿನ್ ಅಮೆರಿಕ ದೇಶಗಳು ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಉತ್ಸುಕವಾಗಿವೆ.  ಸೇನಾ ಮೂಲಗಳ ಪ್ರಕಾರ ಈ ದೇಶಗಳ ಕ್ಷಿಪಣಿ ಖರೀದಿ ಕುರಿತಂತೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಮುಗಿಸಿದ್ದು, ದಕ್ಷಿಣ ಆಫ್ರಿಕಾದ ದೇಶಗಳು ಕೂಡ ಈ ಕ್ಷಿಪಣಿಯತ್ತ ಗಮನ ಹರಿಸಿವೆ.   ಡಿಆರ್ ಡಿಒ ನಿರ್ಮಿತ ಬ್ರಹ್ನೋಸ್ ಕ್ಷಿಪಣಿಗಳು ದೂರಗಾಮಿ ಕ್ಷಿಪಣಿಗಳಾಗಿದ್ದು, ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿವೆ. ಜಲ, ವಾಯು ಮತ್ತು ಭೂಮಿ ಹೀಗೆ ಮೂರು  ಮಾರ್ಗಗಳ ಮೂಲಕ ದಾಳಿ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್ ಕ್ಷಿಪಣಿಗಳು ಕ್ಷಣಾರ್ಧದಲ್ಲಿ ಶತ್ರುಪಡೆಯ ಯುದ್ಧ ವಿಮಾನ ಮತ್ತು ನೌಕೆಗಳು, ಟ್ಯಾಂಕರ್ ಗಳನ್ನು ಸರ್ವ ನಾಶ  ಪಡಿಸಬಲ್ಲದು.

ತೇಜಸ್ ಲಘು ಯುದ್ಧ ವಿಮಾನ


ಭಾರತೀಯ ವಿಜ್ಞಾನಿಗಳ ದಶಕಗಳ ಪರಿಶ್ರಮದ ಬಳಿಕ ಭಾರತೀಯ ಸೇನೆ ತನ್ನದೇ ಆದ ಸ್ವದೇಶಿ ತಂತ್ರಜ್ಞಾನದ ದೇಶಿ ನಿರ್ಮಿತ ಯುದ್ಧ ವಿಮಾನವನ್ನು ತನ್ನದಾಗಿಸಿಕೊಂಡಿದೆ. ಇದೀಗ ಈ  ಅತ್ಯಾಧುನಿಕ ಲಘು ಯುದ್ಧ ವಿಮಾನ ವಿಶ್ವದ ಹಲವು ದೇಶಗಳ ಕುತೂಹಲ ಹೆಚ್ಚಿಸಿದ್ದು, ಈ ಹಿಂದೆ ಪಾಕಿಸ್ತಾನ ದೇಶ ಚೀನಾ ನೆರವಿನೊಂದಿಗೆ ತಯಾರಿಸಿದ್ದ ಜೆಫ್-16 ಯುದ್ಧ ವಿಮಾನ ಖರೀದಿಗೆ  ಶ್ರೀಲಂಕಾ ಸರ್ಕಾರ ಮುಂದಾಗಿತ್ತು. ಆದರೆ ಯಾವಾಗ ವೈಮಾನಿಕ ಪ್ರದರ್ಶನದಲ್ಲಿ ಭಾರತ ತನ್ನ ತೇಜಸ್ ಲಘು ಯುದ್ಧ ವಿಮಾನದ ಸಾಮರ್ಥ್ಯ ಪ್ರದರ್ಶಿಸಿತೋ ಆಗ ಲಂಕಾ ಸರ್ಕಾರ  ಪಾಕಿಸ್ತಾನದ ಯುದ್ಧ ವಿಮಾನ ಖರೀದಿ ನಿರ್ಧಾರಕ್ಕೆ ತಿಲಾಂಜಲಿ ಬಿಟ್ಟು, ತೇಜಸ್ ಯುದ್ಧ ವಿಮಾನ ಖರೀದಿಗಾಗಿ ಭಾರತವನ್ನು ಸಂಪರ್ಕಿಸಿದೆ. ಕೇವಲ ಶ್ರೀಲಂಕಾ ಮಾತ್ರವಲ್ಲದೇ ಈಜಿಪ್ಟ್  ಸರ್ಕಾರ ಕಳೆದ ವರ್ಷ ಫ್ರಾನ್ಸ್ ನೊಂದಿಗೆ ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕಿ ಸಹಿ ಹಾಕಿತ್ತು. ಇದೀಗ ಈಜಿಪ್ಟ್ ಕೂಡ ಆ ಒಪ್ಪಂದವನ್ನು ಮುಂದುವರೆಸುವ ಕುರಿತು ಹಿಂದೆ-ಮುಂದೆ  ನೋಡುತ್ತಿದ್ದು, ತೇಜಸ್ ಖರೀದಿಯತ್ತ ನೋಟ ನೆಟ್ಟಿದೆ, ರಾಫೆಲ್ ಯುದ್ಧ ವಿಮಾನ ದುಬಾರಿಯಾಗಿದ್ದು, ಅದೇ ಸಾಮರ್ಥ್ಯದ ತೇಜಸ್ ಯುದ್ಧ ವಿಮಾನ ಖರೀದಿ ಉಪಯುಕ್ತವಾಗಿರುತ್ತದೆ ಎಂಬುದು  ಈಜಿಪ್ಟ್ ಸರ್ಕಾರದ ಮುಂದಾಲೋಚನೆಯಾಗಿದೆ.

ಆಕಾಶ್ ಕ್ಷಿಪಣಿಗಳು


ಇತ್ತೀಚೆಗಷ್ಟೇ ಕೇಂದ್ರ ರಕ್ಷಣಾ ಸಚಿವ ಪರಿಕ್ಕರ್ ಅವರು ಆಕಾಶ್ ಕ್ಷಿಪಣಿಗಳ ರಫ್ತು ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಭೂಮಿಯಿಂದ ಆಗಸಕ್ಕೆ ಚಿಮ್ಮುವ ಆಕಾಶ್ ಕ್ಷಿಪಣಿಗಳು  ವಾಯುಮಾರ್ಗವಾಗಿ ಆಗಮಿಸುವ ಶತ್ರುಪಾಳಯದ ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳನ್ನು ಗುರುತಿಸಿ ಅವುಗಳನ್ನು ಹಿಂಬಾಲಿಸಿ ಕ್ಷಣ ಮಾತ್ರದಲ್ಲಿ ಹೊಡೆದುರುಳಿಸುವ  ಸಾಮರ್ಥ್ಯಹೊಂದಿದೆ. 25 ಕಿ.ಮೀ ಸಾಮರ್ಥ್ಯದ ಆಕಾಶ್ ಕ್ಷಿಪಣಿಗಳನ್ನು ಮೊಬೈಲ್ ಲಾಂಚರ್ ಮೂಲಕ ಯಾವುದೇ ಪ್ರದೇಶದಿಂದ ಉಡಾಯಿಸಬಹುದಾಗಿದೆ. ಡಿಆರ್ ಡಿಒ ನಿರ್ಮಿತ ಈ ಆಕಾಶ್  ಕ್ಷಿಪಣಿ ಕೂಡ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ಹಲವು ದೇಶಗಳು ರಕ್ಷಣೆಗಾಗಿ ಆಕಾಶ್ ಕ್ಷಿಪಣಿ ಖರೀದಿಗೆ ಮುಂದಾಗಿವೆ.

ಎಇಡಬಲ್ಯೂಸಿ ಕಣ್ಗಾವಲು ವ್ಯವಸ್ಥೆ(Airborne early warning and control)


ಡಿಆರ್ ಡಿಒದ ಅತ್ಯಂತ ಪ್ರತಿಷ್ಟಿತ ಸಂಶೋಧನೆಗಳಲ್ಲಿ ಎಇಡಬಲ್ಯೂಸಿ ಕಣ್ಗಾವಲು ವ್ಯವಸ್ಥೆ ಕೂಡ ಒಂದು. ಆಕಾಶ , ಭೂಮಿ ಮಾರ್ಗವಾಗಲೀ ಅಥವಾ ಜಲಮಾರ್ಗವಾಗಲೀ ಯಾವುದೇ  ಮಾರ್ಗದಿಂದ ಶತ್ರು ಪಾಳಯದ ವಿಮಾನಗಳು, ವಾಹನಗಳು ಅಥವಾ ನೌಕೆಗಳು ಗಡಿ ಪ್ರವೇಶಿಸಿದರೆ ಈ ಎಇಡಬಲ್ಯೂಸಿ ಕಣ್ಗಾವಲು ವ್ಯವಸ್ಥೆ ಇದನ್ನು ಕ್ಷಣ ಮಾತ್ರದಲ್ಲಿ ಪತ್ತೆ ಹಚ್ಚುತ್ತದೆ.  ಎಇಡಬಲ್ಯೂಸಿ ಕಣ್ಗಾವಲು ಆಗಸದಲ್ಲಿ ಹಾರಾಡುತ್ತಿರುವಂತೆಯೇ ತನ್ನ ಅತ್ಯಾಧುನಿಕ ರಾಡಾರ್ ವ್ಯವಸ್ಥೆ ಮೂಲಕ ಭೂಮಿ, ಜಲ ಮತ್ತು ವಾಯು ಭಾಗಗಳಲ್ಲಿ ಸಂಚರಿಸುವ ಶತ್ರುಪಾಳಯದ  ವಿಮಾನ, ನೌಕೆಗಳನ್ನು ಪತ್ತೆ ಹಚ್ಚಿ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸುತ್ತದೆ. ಡಿಆರ್ ಡಿಒದ ಈ ಅತ್ಯಾಧುನಿಕ ವ್ಯವಸ್ಥೆ ಬೆಂಗಳೂರಿನಲ್ಲಿ ನಡೆದ ಏರ್ ಷೋದಲ್ಲಿ ಎಲ್ಲರ ಗಮನ  ಸೆಳೆದಿತ್ತು. ಇದೀಗ ಈ ವ್ಯವಸ್ಥೆಗಾಗಿ ಹಲವು ದೇಶಗಳು ಬೇಡಿಕೆ ಸಲ್ಲಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com