
ಗಯಾ: ಕಾರ್ ಓವರ್ಟೇಕ್ ಪ್ರಕರಣದಲ್ಲಿ 19 ವರ್ಷದ ಯುವಕನ್ನು ಗುಂಡಿಟ್ಟು ಕೊಲೆಗೈದ ಮನೋರಮಾ ದೇವಿ ಪುತ್ರ ರಾಕಿ ಯಾದವ್ನನ್ನು ಶೋಧಿಸುವ ಸಂದರ್ಭ ಪುರಿ ಬಡಾವಣೆಯಲ್ಲಿರುವ ಮನೆಯಲ್ಲಿ ಅಕ್ರಮ ಮದ್ಯದ ಬಾಟಲಿಗಳು ಪೊಲೀಸರಿಗೆ ಸಿಕ್ಕ ಆರೋಪದಲ್ಲಿ ತಲೆ ಮರೆಸಿಕೊಂಡಿದ್ದ ಜೆಡಿಯು ಶಾಸಕಿ ಮನೋರಮಾ ದೇವಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮೇ 10ರಂದು ರಾಕಿಯಾದವ್ ತನ್ನ ಎಸ್ಯುವಿ ಕಾರನ್ನು 19 ವರ್ಷದ ಆದಿತ್ಯ ಸಚ್ದೇವ್ ಓವರ್ಟೇಕ್ ಮಾಡಿದ ಎಂಬ ಕಾರಣಕ್ಕಾಗಿ ಗುಂಡಿಟ್ಟು ಕೊಲೆಗೈದಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲು ಮನೋರಮ ದೇವಿ ಅವರ ಮನೆಯಯನ್ನು ಪೊಲೀಸರು ಪರಿಶೀಲಿಸುವ ವೇಳೆ ಕಾನೂನು ಬಾಹಿರವಾಗಿ ಮನೆಯಲ್ಲಿ ತಯಾರಿಸಿದ ಮದ್ಯ ಸಿಕ್ಕಿತ್ತು.
ಈ ಆರೋಪದ ಮೇಲೆ ತಲೆಮರೆಸಿಕೊಂಡಿದ್ದ ಜೆಡಿಯು ಉಚ್ಚಾಟಿತ ಶಾಸಕಿ ಮನೋರಮಾ ದೇವಿ ಮಂಗಳವಾರ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ ಬಳಿಕ ಮಾತನಾಡಿದ ಮನೋರಮಾ ದೇವಿ, ‘ಪ್ರಕರಣದ ಕುರಿತು ನನಗೆ ಭಯವಿಲ್ಲ. ನನ್ನ ಮನೆಯಲ್ಲಿ ಯಾವುದೇ ರೀತಿಯ ಮದ್ಯ ತಯಾರಿಸಲಾಗಿಲ್ಲ. ಇದು ರಾಜಕೀಯ ಷಡ್ಯಂತ್ರ’ ಎಂದಿದ್ದಾರೆ.
Advertisement