
ಇಸ್ಲಾಮಾಬಾದ್: ಭಾರತ ತನ್ನ ರಕ್ಷಣೆಗಾಗಿ ಸ್ವದೇಶಿ ತ೦ತ್ರಜ್ಞಾನ ಹೊ೦ದಿರುವ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದ ಬೆನ್ನಲ್ಲೇ ಒಳಗೊಳೆಗೇ ಕುದ್ದು ಹೋಗಿರುವ ಪಾಕಿಸ್ತಾನ, ಭಾರತಕ್ಕಿಂತಲೂ ಅತ್ಯಾಧುನಿಕ ತಂತ್ರಜ್ಞಾನದ ರಕ್ಷಣಾ ಪರಿಕರವನ್ನು ಅಳವಡಿಸಿಕೊಳ್ಳುವುದಾಗಿ ಹೇಳಿಕೊಂಡಿದೆ.
ಕಳೆದ ಭಾನುವಾರವಷ್ಟೇ ಭಾರತದ ಡಿಆರ್ ಡಿಒ ಸಂಸ್ಥೆ ಮೊದಲ ಸ್ವದೇಶಿ ನಿರ್ಮಿತ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿಗಳ ಭದ್ರತಾ ಸಲಹೆಗಾರ ಸರ್ತಾಜ್ ಎಜಾಜ್ ಅವರು, ಭಾರತಕ್ಕಿಂತಲೂ ಅತ್ಯಾಧುನಿಕ ತಂತ್ರಜ್ಞಾನದ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆಯನ್ನು ಪಾಕಿಸ್ತಾನ ಅಳವಡಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಸರ್ಕಾರದ ಅಧಿಕೃತ ರೇಡಿಯೋಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಸರ್ತಾಜ್ ಎಜಾಜ್ ಅವರು ಈ ಬಗ್ಗ ಮಾತನಾಡಿದ್ದು, ಎಲ್ಲ ವಿಚಾರಗಳನ್ನು ಇಸ್ಲಾಮಾಬಾದ್ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಕೈಕಟ್ಟಿಯಂತೂ ಕುಳಿತುಕೊಳ್ಳುವುದಿಲ್ಲ. ನಾವು ಸಹ ಖಂಡಿತ ಭಾರತದ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆಗಿಂತ ಅತ್ಯಾಧುನಿಕ ವ್ಯವಸ್ಛೆಯನ್ನು ಹೊಂದುತ್ತೇವೆ ಎಂದು ಹೇಳಿದ್ದಾರೆ.
"ಭಾರತದ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆಯ ಪರೀಕ್ಷೆ ಖಂಡಿತಾ ಪ್ರಾಂತೀಯ ಅಧಿಕಾರದ ಅಸಮತೋಲನ ಉಂಟುಮಾಡುತ್ತದೆ. ಭಾರತದಲ್ಲಿನ ಬೆಳವಣಿಗಳನ್ನು ಪಾಕಿಸ್ತಾನ ಖಂಡಿತಾ ಗಂಭೀರವಾಗಿ ಆಲೋಚಿಸುತ್ತಿದ್ದು, ನಾವು ಕೂಡ ಭಾರತಕ್ಕಿಂತಲೂ ಅತ್ಯಾಧುನಿಕ ತಂತ್ರಜ್ಞಾನದ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತೇವೆ" ಎಂದು ಎಜಾಜ್ ಹೇಳಿದ್ದಾರೆ.
ಭಾರತದ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆಯ ಪರೀಕ್ಷೆಯಿಂದ ಪಾಕಿಸ್ತಾನಕ್ಕೆ ಅಚ್ಚರಿಯೇನೂ ಆಗಿಲ್ಲ. ಆದರೆ ಇದು ಖಂಡಿತಾ ಅಧಿಕಾರದ ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗುತ್ತದೆ. ಅಮೆರಿಕದೊಂದಿಗಿನ ಸಂಬಂಧವನ್ನು ಪಾಕಿಸ್ತಾನ ನಿಜಕ್ಕೂ ಗೌರವಿಸುತ್ತದೆ. ಆದರೆ ಚೀನಾ ದೇಶಕ್ಕೆ ಭಾರತ ಪ್ರಬಲ ಎದುರಾಳಿಯಾಗ ಬಲ್ಲದು ಎಂದು ಭಾವಿಸುತ್ತಿದೆ. ಹೀಗಾಗಿ ಪಾಕಿಸ್ತಾನ ವಿಶ್ವಸಮುದಾಯದೊಂದಿಗೆ ಈ ಬೆಳವಣಿಗೆಗಳ ಬಗ್ಗೆ ಚರ್ಚಿಸುತ್ತೇವೆ ಎಂದು ಎಜಾಜ್ ಹೇಳಿದ್ದಾರೆ.
ಕಳೆದ ಭಾನುವಾರವಷ್ಟೇ ಭಾರತ ಒಡಿಶಾ ಕರಾವಳಿ ತೀರದಲ್ಲಿ ಸಂಪೂರ್ಣ ಸ್ವದೇಶಿ ತಂತ್ರಜ್ಞಾನದೊಂದಿಗೆ ರೂಪುಗೊಂಡಿರುವ ಈ ಸೂಪರ್ ಸಾನಿಕ್ ಇಂಟರ್ ಸೆಪ್ಟರ್ ಮಿಸೈಲ್ ವ್ಯವಸ್ಥೆಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಈ ಬಗ್ಗೆ ಅಪಸ್ವರ ಎತ್ತಿದ್ದು, ಈ ಹಿಂದೆಯೂ ಕೂಡ ಪಾಕಿಸ್ತಾನ ಪ್ರಧಾನಿಗಳ ಭದ್ರತಾ ಸಲಹೆಗಾರರಾದ ಎಜಾಜ್ ಅವರು ಪಾಕಿಸ್ತಾನ-ಅಮೆರಿಕ ನಡುವಿನ ಎಫ್-16 ಯುದ್ಧ ವಿಮಾನ ಖರೀದಿಯಲ್ಲಿ ಭಾರತ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿದ್ದರು. ಆದರೆ ಒಬಮಾ ನೇತೃತ್ವದ ಅಮೆರಿಕ ಸರ್ಕಾರ ಎಫ್-16 ಯುದ್ಧ ವಿಮಾನ ಖರೀದಿಯಲ್ಲಿನ ಸಬ್ಸಿಡಿಯನ್ನು ರದ್ದುಗೊಳಿಸಿ, ಪೂರ್ಣ ಪ್ರಮಾಣದ ಹಣ ನೀಡಿ ವಿಮಾನ ಖರೀದಿಸುವಂತೆ ಹೇಳಿತ್ತು.
Advertisement