
ಜಮ್ಮು: ಜಮ್ಮುವಿನಲ್ಲಿರುವ ಹಿಂದೂಗಳ ಪವಿತ್ರಾ ಯಾತ್ರಾಸ್ಥಳ ವೈಷ್ಣೋದೇವಿ ಪರ್ವತಾರಣ್ಯದಲ್ಲಿ ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಮಾತಾ ವೈಷ್ಣೋದೇವಿ ದೇಗುಲವಿರುವ ತ್ರಿಕುಟ ಪರ್ವತಾರಣ್ಯದಲ್ಲಿ ಕಳೆದ 2 ದಿನಗಳ ಹಿಂದೆಯೇ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಇಂದು ಬೆಂಕಿಯ ಕೆನ್ನಾಲಿಗೆ ಅರಣ್ಯದಾದ್ಯಂತ ವ್ಯಾಪಕವಾಗಿ ಪಸರಿಸುತ್ತಿದೆ. ಘಟನಾ ಸ್ಥಳದಲ್ಲಿ ಈಗಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾತರಣೆ ನಡೆಸುತ್ತಿದ್ದರೂ ಬೆಂಕಿ ಮಾತ್ರ ಇನ್ನೂ ತಹಬದಿಗೆ ಬಂದಿಲ್ಲ. ಹೀಗಾಗಿ ಅಗ್ನಿಶಾಮಕದಳಕ್ಕೆ ಇದೀಗ ಸಿಆರ್ ಪಿಎಫ್ ಯೋಧರು ಸಾಥ್ ನೀಡುತ್ತಿದ್ದಾರೆ.
ಮೂಲಗಳ ಪ್ರಕಾರ ಕಾಡ್ಗಿಚ್ಚಿನಿಂದಾಗಿ ಈಗಗಾಲೇ ಸುಮಾರು 150 ಹೆಕ್ಟೇರ್ ಪ್ರದೇಶದ ಅರಣ್ಯ ಪ್ರದೇಶ ನಾಶವಾಗಿದ್ದು, ಸುಮಾರು 55 ಕಡೆಗಳಲ್ಲಿ ಬೆಂಕಿ ಸಕ್ರಿಯವಾಗಿದೆ ಎಂದು ಹೇಳಲಾಗುತ್ತಿದೆ. ಕಾಡ್ಗಿಚ್ಚು ಸಂಭವಿಸಿರುವ ಅರಣ್ಯ ಪ್ರದೇಶದ ಸಮೀಪದಲ್ಲಿಯೇ ಮಾತಾ ವೈಷ್ಣೋದೇವಿ ದೇಗುಲವಿದ್ದು, ಕಾಡ್ಗಿಚ್ಚಿನಿಂದಾಗಿ ಭಕ್ತರು ಆತಂಕಕ್ಕೊಳಗಾಗಿದ್ದಾರೆ. ಆದರೆ ಭಕ್ತರ ಆತಂಕ ದೂರ ಮಾಡಿರುವ ಅಧಿಕಾರಿಗಳು ಕಾಡ್ಗಿಚ್ಚಿನಿಂದ ದೇಗುಲಕ್ಕೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಕಾಡ್ಗಿಚ್ಚು ಸಕ್ರಿಯವಾಗಿರುವ ಪ್ರದೇಶ ದೇಗುಲದಿಂದ ಸಾಕಷ್ಟು ದೂರವಿದೆ. ಹೀಗಿದ್ದೂ ಬೆಂಕಿ ನಂದಿಸಲು ಸಕಲ ಕ್ರಮಗಳನ್ನು ಕೈಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕಟ್ರಾದಲ್ಲಿರುವ ದೇಗುಲಕ್ಕೆ ಯಾವುದೇ ಹಾನಿಯಾಗದಿರಲಿ ಎಂದು ಮುಂಜಾಗ್ರತಾ ಕ್ರಮವಾಗಿ ಬೆಂಕಿ ನಂದಿಸುವ ಕಾರ್ಯಾಚರಣೆಗೆ ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಲಾಗುತ್ತಿದೆ.
ಟ್ರಕ್ಕಿಂಗ್ ಗೆ ಬಂದವರಿಂದ ಕಾಡಿಗೆ ಬೆಂಕಿ
ಇನ್ನು ಕಟ್ರಾದಲ್ಲಿರುವ ತ್ರಿಕುಟ ಪರ್ವತದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು, ಕಾಡ್ಗಿಚ್ಚಿಗೆ ಈ ಪರ್ವತಕ್ಕೆ ಆಗಮಿಸಿದ್ದ ನಿರ್ಲಕ್ಷ್ಯ ಟ್ರಕ್ಕರ್ ಗಳೇ ಕಾರಣ ಎಂದು ಹೇಳಿದ್ದಾರೆ. ಒಣ ಮರಗಳನ್ನು ಸಂಗ್ರಹಿಸಿ ಬೆಂಕಿ ಕಾಯಿಸಿಕೊಂಡ ಟ್ರಕ್ಕರ್ ತಾವು ಹೋಗುವ ವೇಳೆ ಬೆಂಕಿಯನ್ನು ನಂದಿಸದೇ ಇರುವುದೇ ಕಾಡ್ಗಿಚ್ಚಿಗೆ ಕಾರಣ ಎಂದು ಹೇಳಲಾಗುತ್ತಿದೆ. ತ್ರಿಕುಟ ಅರಣ್ಯದ ಸಮೀಪದಲ್ಲಿಯೇ ವೈಷ್ಣೋದೇವಿ ದೇಗುಲವಿದ್ದು, ದೇಗುಲಕ್ಕೆ ಆಗಮಿಸುವ ಲಕ್ಷಾಂತರ ಮಂದಿ ಭಕ್ತರ ಪೈಕಿ ಹಲವರು ಟ್ರಕ್ಕಿಂಗ್ ಮೂಲಕ ದೇಗುಲಕ್ಕೆ ಆಗಮಿಸುತ್ತಾರೆ. ಹೀಗೆ ಆಗಮಿಸಿರುವ ಕೆಲವರಿಂದ ಕಾಡ್ಗಿಚ್ಚು ಸಂಭವಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Advertisement