ಚುನಾವಣಾ ವಿಶ್ಲೇಷಣೆ: ಕೇರಳದಲ್ಲಿ ಚಾಂಡಿಗೆ 'ಕೈ' ಕೊಟ್ಟವರಾರು?

'ಎಲ್‌ಡಿಎಫ್ ಬರಲಿ, ಎಲ್ಲವೂ ಸರಿಯಾಗುತ್ತದೆ' ಎಂಬ ಚುನಾವಣಾ ಘೋಷಣೆಯೊಂದಿಗೆ ಎಡರಂಗ ಕೇರಳ ಚುನಾವಣಾ ಕಣಕ್ಕಿಳಿದಿತ್ತು. ಇತ್ತ ಕಾಂಗ್ರೆಸ್ ಪಕ್ಷ ನಾವು...
ವಿಎಸ್ ಅಚ್ಯುತಾನಂದನ್ - ಉಮ್ಮನ್ ಚಾಂಡಿ
ವಿಎಸ್ ಅಚ್ಯುತಾನಂದನ್ - ಉಮ್ಮನ್ ಚಾಂಡಿ
'ಎಲ್‌ಡಿಎಫ್ ಬರಲಿ, ಎಲ್ಲವೂ ಸರಿಯಾಗುತ್ತದೆ' ಎಂಬ ಚುನಾವಣಾ ಘೋಷಣೆಯೊಂದಿಗೆ ಎಡರಂಗ ಕೇರಳ ಚುನಾವಣಾ ಕಣಕ್ಕಿಳಿದಿತ್ತು. ಇತ್ತ ಕಾಂಗ್ರೆಸ್ ಪಕ್ಷ ನಾವು ಅಧಿಕಾರ ಮುಂದುವರಿಸುತ್ತೇವೆ, ಕೇರಳವನ್ನು ಪ್ರಗತಿಯತ್ತ ಕೊಂಡೊಯ್ಯುತ್ತೇವೆ ಎಂದಿತ್ತು. ಎಡ ಬಲ ಪಕ್ಷಗಳ ಪೈಪೋಟಿ ನಡುವೆ ಬಿಜೆಪಿ, ದಾರಿತಪ್ಪಿದ ಕೇರಳಕ್ಕೆ ನಾವು ದಾರಿ ತೋರಿಸುತ್ತೇವೆ ಎಂದು ಹೇಳಿ ಚುನಾವಣೆಯಲ್ಲಿ ಸ್ಪರ್ಧಿಸಿತ್ತು.
ಗುರುವಾರ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಚುನಾವಣಾ ಸಮೀಕ್ಷೆಯಂತೆಯೇ ಈ ಬಾರಿ ಕೇರಳದಲ್ಲಿ ಎಡಪಕ್ಷಗಳು ಬಹುಮತ ಪಡೆದು ಅಧಿಕಾರಕ್ಕೇರಲು ಸಿದ್ಧವಾಗಿವೆ. ಐದು ವರ್ಷ ಯುಡಿಎಫ್ ಸರ್ಕಾರ ಅಧಿಕಾರ ಚಲಾಯಿಸಿದರೆ, ಮುಂದಿನ ಐದು ವರ್ಷ ಎಲ್‌ಡಿಎಫ್ ಸರ್ಕಾರ ಅಧಿಕಾರ ಚಲಾಯಿಸುವ ಕೇರಳದಲ್ಲಿ, ಯಾವಾಗಲೂ ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆಯೇ ಪೈಪೋಟಿ ನಡೆಯುತ್ತಿರುತ್ತದೆ. 
ಆದಾಗ್ಯೂ, ಕಳೆದ ಐದು ವರ್ಷ ಅಧಿಕಾರ ಚಲಾಯಿಸಿದ್ದ ಉಮ್ಮನ್‌ಚಾಂಡಿ ಸರ್ಕಾರ 2016ರ ಚುನಾವಣೆಯಲ್ಲಿ ಪರಾಭವಗೊಳ್ಳಲು ಕೇರಳದಲ್ಲಿ ನಡೆದ ಹಗರಣಗಳೇ ಕಾರಣ.
ಸೋಲಾರ್ ಹಗರಣ
ಚಾಂಡಿಯವರ ಅಧಿಕಾರವಧಿಯಲ್ಲಿ ನಡೆದ ಅತೀ ದೊಡ್ಡ ಹಗರಣವಾಗಿದೆ ಸೋಲಾರ್ ಹಗರಣ. ಇಡೀ ಕೇರಳವನ್ನೇ ಈ ಹಗರಣ ಬೆಚ್ಚಿ ಬೀಳಿಸಿತ್ತು. ಸೋಲಾರ್ ಹಗರಣದ ಬಗ್ಗೆ ಸರಿತಾ ನಾಯರ್ ಆರೋಪಗಳನ್ನು ಹೊರಿಸಿ ಮುಂದೆ ಬರುತ್ತಿದ್ದಂತೆ ಚಾಂಡಿ ಸರ್ಕಾರದ ವ್ಯವಹಾರಗಳು ಜನರ ಮುಂದೆ ತೆರೆಯುತ್ತಾ ಹೋಯಿತು. ಈ ಹಗರಣದಿಂದಾಗಿ ಚಾಂಡಿ ಸರ್ಕಾರದಲ್ಲಿದ್ದ ವಿತ್ತ ಸಚಿವ ಕೆಎಂ ಮಾಣಿ ಸಚಿವ ಸ್ಥಾನವನ್ನೂ ಕಳೆದುಕೊಂಡರು. 
ಮದ್ಯ ನಿಷೇಧ
ಕೇರಳಿಗರು ಮದ್ಯದಿಂದ ದೂರವಿರುವುದಿಲ್ಲ. ಇಂತಿರ್ಪ ಚಾಂಡಿ ಸರ್ಕಾರ ಬಾರ್‌ಗಳನ್ನು ಮುಚ್ಚಿಸಿತು. ಬಿಯರ್, ವೈನ್‌ಗಳೊಂದಿಗೆ ಇನ್ನಿತರ ಮದ್ಯಗಳಿಗೂ ನಿಷೇಧ ಹೇರಲು ಚಾಂಡಿ ಸರ್ಕಾರ ಪ್ರಯತ್ನಿಸಿದರೂ ಈ ಯೋಜನೆ ಸಾಧ್ಯವಾಗಲಿಲ್ಲ.
ಚಾಂಡಿಯವರ ನೇತೃತ್ವ
ಐದು ವರ್ಷಗಳ ಕಾಲ ಕೇರಳದ ಮುಖ್ಯಮಂತ್ರಿ ಸ್ಥಾನವನ್ನು ವಹಿಸಿದ್ದರೂ ಉಮ್ಮನ್ ಚಾಂಡಿಗೆ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಅಲೆಯನ್ನುಂಟು ಮಾಡಲು ಸಾಧ್ಯವಾಗಲೇ ಇಲ್ಲ. ತನ್ನೊಂದಿಗೆ ಇದ್ದ ಸಚಿವರು, ಶಾಸಕರು ಒಬ್ಬೊಬ್ಬರೇ ಭಿನ್ನಮತದಿಂದಾಗಿ ದೂರ ಸರಿದಾಗಲೂ ಅವರ ಮನವೊಲಿಸುವಲ್ಲಿ ಚಾಂಡಿ ಎಡವಿದರು. ಚಾಂಡಿಯವರಿಗೆ ಕ್ಲೀನ್ ಇಮೇಜ್ ಇದ್ದರೂ ಅವರ ಸಚಿವ ಸಂಪುಟದಲ್ಲಿದ್ದ ಭ್ರಷ್ಟರಿಂದಾಗಿ ಜನರು ಚಾಂಡಿಯವರ ಮೇಲೆ ವಿಶ್ವಾಸ ಕಳೆದುಕೊಂಡು ಬಿಟ್ಟಿದ್ದರು. ಅಷ್ಟೇ ಅಲ್ಲದೆ ವಿಪಕ್ಷದಲ್ಲಿರುವ ಎಡರಂಗ, ಸರ್ಕಾರದ ಪ್ರತಿಯೊಂದು ನಡೆಯನ್ನು ವಿಮರ್ಶಿಸುತ್ತಲೇ ಇರುತ್ತಿತ್ತು. ವಿಪಕ್ಷಗಳ ಒತ್ತಡ, ಭಿನ್ನಮತೀಯರ ಹುಸಿ ಮುನಿಸು, ಹಗರಣ ಮೊದಲಾದ ಸಮಸ್ಯೆಗಳ ನಡುವೆಯೇ ಒದ್ದಾಡಿ ಚಾಂಡಿ 5 ವರ್ಷಗಳನ್ನು ಪೂರ್ತಿಗೊಳಿಸಿದ್ದರು.
ಎಲ್‌ಡಿಎಫ್‌ನ ಚುರುಕಿನ ಪ್ರಚಾರ
ಈ ಬಾರಿ ಕೇರಳದಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗಿಂತ ಎಲ್‌ಡಿಎಫ್ ಚುರುಕಿನ ಪ್ರಚಾರ ನಡೆಸಿತ್ತು. ಆನ್‌ಲೈನ್‌ನಲ್ಲಿಯೂ ಸಕ್ರಿಯ ಪ್ರಚಾರ ನಡೆಸಿದ್ದ ಎಡರಂಗಗಳು ಜನರನ್ನು ಸಂಪರ್ಕಿಸಿ ಅವರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಮುತುವರ್ಜಿ ವಹಿಸಿದ್ದವು. ಮದ್ಯ ನಿರ್ಮೂಲನೆ, ಪ್ಲಾಸ್ಟಿಕ್ ನಿರ್ಮೂಲನೆ ಹಾಗೂ ಮಹಿಳಾ ಸುರಕ್ಷೆಯನ್ನೇ ಪ್ರಧಾನ ಅಜೆಂಡಾವಾಗಿರಿಸಿ ಎಲ್‌ಡಿಎಫ್ ಜನರಲ್ಲಿ ಮತ ಯಾಚನೆ ಮಾಡಿತು. ಕಮ್ಯೂನಿಸ್ಟ್ ಪಕ್ಷದ ಹಿರಿಯ ನೇತಾರ ಮತ್ತು ಮಾಜಿ ಮುಖ್ಯಮಂತ್ರಿ ವಿಎಸ್ ಅಚ್ಯುತಾನಂದನ್ ಕೇರಳದ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ಈ ಬಾರಿ ಅಚ್ಯುತಾನಂದನ್ ಸಾಮಾಜಿಕ ತಾಣದಲ್ಲಿಯೂ ಪ್ರಚಾರ ಕಾರ್ಯಕ್ರಮಗಳನ್ನು ಮಾಡಿ ಗಮನ ಸೆಳೆದಿದ್ದರು.
ಕಮಲ ಅರಳಿಸಿದ ಒ ರಾಜಗೋಪಾಲ್
ಎಲ್‌ಡಿಎಫ್ ಮತ್ತು ಯುಡಿಎಫ್‌ನ ಅಧಿಕಾರದ ದೊಡ್ಡಾಟ ಮತ್ತು ಸಣ್ಣಾಟಗಳ ನಡುವೆ ಬಿಜೆಪಿ ಪಕ್ಷ ಒಂದು ಸೀಟು ಗಿಟ್ಟಿಸಿದೆ. ತಿರುವನಂತಪುರಂನ ನೇಮಂ ವಿಧಾನಸಭಾ ಕ್ಷೇತ್ರದಲ್ಲಿ  ಬಿಜೆಪಿ ಅಭ್ಯರ್ಥಿ ಒ ರಾಜಗೋಪಾಲ್ ಅವರು  8671 ಮತಗಳ ಬಹುಮತದಿಂದ ಚುನಾವಣೆ ಗೆದ್ದಿದ್ದಾರೆ. ಅದೇ ವೇಳೆ ಕಾಸರಗೋಡಿನಲ್ಲಿ ಒಂದಾದರು ಸೀಟು ಗೆಲ್ಲುವ ಭರವಸೆ ಬಿಜೆಪಿಗಿತ್ತು. ಕಾಸರಗೋಡಿನ ಮಂಜೇಶ್ವರ ಕ್ಷೇತ್ರದಲ್ಲಿ ಸುರೇಂದ್ರನ್ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ರವೀಶ ತಂತ್ರಿ ಕುಂಟಾರು ಗೆಲುವಿನ ಬಗ್ಗೆ ನಿರೀಕ್ಷೆ ಇತ್ತಾದರೂ, ಈ ಇಬ್ಬರೂ ಅಭ್ಯರ್ಥಿಗಳು ಸೋಲು ಅನುಭವಿಸಿದ್ದಾರೆ. ಆದರೆ ಸಮಾಧಾನಕರ ಸಂಗತಿ ಎಂದರೆ ಸೀಟು ಗೆಲ್ಲದೇ ಇದ್ದರೂ ಕೆ. ಸುರೇಂದ್ರನ್ ಅವರು ಸಿಪಿಎಂ ಅಭ್ಯರ್ಥಿ ಸಿಹೆಚ್ ಕುಂಞಂಬು ಅವರಿಂದ ಮತ್ತು ರವೀಶ ತಂತ್ರಿ ಐಎನ್‌ಎಲ್ ಅಭ್ಯರ್ಥಿ ಡಾ.ಎ.ಎ ಅಮೀನ್ ಅವರಿಂದ ಹೆಚ್ಚು ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ.
ಮೋದಿಯವರ ಸೊಮಾಲಿಯಾ ಹೇಳಿಕೆ ಪ್ರಭಾವ ಬೀರಿತೆ?
ಚುನಾವಣಾ ಪ್ರಚಾರಕ್ಕಾಗಿ ಕೇರಳಕ್ಕೆ ಬಂದಿದ್ದ ಮೋದಿ, ಕೇರಳದ ಪರಿಶಿಷ್ಟ ವರ್ಗದಲ್ಲಿರುವ ಶಿಶು ಮರಣ ಪ್ರಮಾಣ ದರ ಸೊಮಾಲಿಯಾಗಿಂತಲೂ ಭೀಕರವಾಗಿದೆ ಎಂದು ಹೇಳಿದ್ದರು. ಆದರೆ ಕೇರಳಿಗರು ಮೋದಿ ಕೇರಳವನ್ನು ಸೊಮಾಲಿಯಾಗೆ ಹೋಲಿಸಿದ್ದಾರೆ ಎಂದು ಹೇಳಿ ಆನ್‌ಲೈನ್‌ನಲ್ಲಿ ಪೋಮೋನೆ ಮೋದಿ ಹ್ಯಾಶ್‌ಟ್ಯಾಗ್‌ನೊಂದಿಗೆ ಮೋದಿಯವರ ವಿರುದ್ದ ಕಿಡಿ ಕಾರಿದ್ದರು. ಇದೇ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡ ಎಡರಂಗ ಮತ್ತು ಕಾಂಗ್ರೆಸ್ ಮೋದಿ ಮತ್ತು ಬಿಜೆಪಿ ವಿರುದ್ಧ ಟೀಕಾಪ್ರಹಾರವನ್ನೂ ಮಾಡಿದ್ದವು. ಆದರೆ ಮೋದಿಯವರ ಈ ಹೇಳಿಕೆ ಕೇರಳದ ಚುನಾವಣೆಯನ್ನು ಯಾವ ರೀತಿಯಲ್ಲಿಯೂ ಬಾಧಿಸಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com