ಉ.ಪ್ರದೇಶ ಚುನಾವಣೆಗೆ ಬಿಜೆಪಿ ತಯಾರಿ; ಮೋದಿ ಸಂಪುಟದಲ್ಲಿ ಬದಲಾವಣೆ ಸಾಧ್ಯತೆ

ಪಂಚ ರಾಜ್ಯಗಳ ಚುನಾವಣೆಯಲ್ಲಿ ಅಸ್ಸಾಂ ಗೆಲುವಿನಿಂದ ಸ್ಪೂರ್ತಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ತಮ್ಮ ಚಿತ್ತವನ್ನು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯತ್ತ ಹರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ (ಸಂಗ್ರಹ ಚಿತ್ರ)
Updated on

ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯಲ್ಲಿ ಅಸ್ಸಾಂ ಗೆಲುವಿನಿಂದ ಸ್ಪೂರ್ತಿ ಪಡೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ತಮ್ಮ ಚಿತ್ತವನ್ನು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯತ್ತ ಹರಿಸಿದ್ದಾರೆ.

ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ಮೋದಿ ತಮ್ಮ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲು ಮುಂದಾಗಿದ್ದು, ಕಡಿಮೆ ಕೆಲಸ ಮಾಡಿರುವ ಕೇಂದ್ರ ಸಚಿವರುಗಳಿಗೆ ಗೇಟ್ ಪಾಸ್ ನೀಡಲು ಮುಂದಾಗಿದ್ದಾರೆ. ಈ ಸ್ಥಾನಗಳಿಗೆ ಉತ್ತರ ಪ್ರದೇಶದ ಬಿಜೆಪಿ ಘಟಕದ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡುವ ಕುರಿತು ಮಾತುಗಳು ಕೇಳಿಬರುತ್ತಿವೆ.

ಇನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೂಡ ಉತ್ತರ ಪ್ರದೇಶ ಬಿಜೆಪಿ ಘಟಕದಲ್ಲಿ ಕೆಲ ಮಹತ್ತರ ಬದಲಾವಣೆ ಮಾಡಲು ಮುಂದಾಗಿದ್ದು, ಉತ್ತರ ಪ್ರದೇಶದ ನೂತನ ಮುಖಂಡರಿಗೆ ವಿಧಾನಸಭೆ ಚುನಾವಣೆಯ ಜವಾಬ್ದಾರಿ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶ ಬಿಜೆಪಿ ಘಟಕವನ್ನು ವಿಧಾನಸಭೆ ಚುನಾವಣೆಯಲ್ಲಿ ಪ್ರಾಂತೀಯವಾಗಿ ವಿಭಜಿಸಿ ಆಯಾ ಪ್ರಾಂತ್ಯಗಳ ಚುನಾವಣಾ ಜವಾಬ್ದಾರಿಯನ್ನು ಸ್ಥಳೀಯ ಮುಖಂಡರಿಗೆ ಹಂಚುವುದು ಬಿಜೆಪಿ ಪಕ್ಷದ ಪ್ರಮುಖ ನಿರ್ಧಾರವಾಗಿದೆ.

ಇದಲ್ಲದೆ ಚುನಾವಣೆಯ ವೇಳೆ ಸಾಮೂಹಿಕ ನಾಯಕತ್ವದ ಮೂಲಕ ವಿಧಾನಸಭೆ ಚುನಾವಣೆ ಎದುರಿಸಲು ನಿರ್ಧರಿಸಲಾಗಿದ್ದು, ಆ ಮೂಲಕ ಪಕ್ಷದಲ್ಲಿನ ಉಂಟಾಗಬಹುದಾದ ಭಿನ್ನಮತ ಸ್ಫೋಟವನ್ನು ತಡೆಯಲು ಬಿಜೆಪಿ ಯೋಜನೆ ರೂಪಿಸಿದೆ. ಅಲ್ಲದೆ ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷರನ್ನು ಹೊರತು ಪಡಿಸಿ ಉಪಾಧ್ಯಕ್ಷ ಮತ್ತು ಸಾಮಾನ್ಯ ಕಾರ್ಯದರ್ಶಿ ಸ್ಥಾನಗಳಿಗೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ನೇಮಕ ಮಾಡಲು ಅಮಿತ್ ಶಾ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಆರ್ ಎಸ್ಎಸ್ ನೆರವು ಕೋರಲಿರುವ ಬಿಜೆಪಿ
ಅಸ್ಸಾಂ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಆರ್ ಎಸ್ಎಸ್ ಸಲಹೆಗಳು ಮಹತ್ತರ ಪಾತ್ರ ನಿರ್ವಹಿಸಿದ್ದು, ಉತ್ತರ ಪ್ರದೇಶ ಚುನಾವಣೆಯಲ್ಲೂ ಬಿಜೆಪಿ ಆರ್ ಎಸ್ ಎಸ್ ಸಂಘಟನೆಯ ಸಲಹೆ ಪಡೆಯಲಿದೆ. ಸಂಘ ಪರಿವಾರದ ಸಲಹೆಗಳ ಮೇರೆಗೆ ಚುನಾವಣಾ ಕಾರ್ಯತಂತ್ರ ಯೋಜಿಸಲು ಬಿಜೆಪಿ ನಿರ್ಧರಿಸಿದೆ.

ಹಲವು ಕೇಂದ್ರ ಸಚಿವರಿಗೆ ಕೋಕ್
ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ, ಪರಿಸರ ಖಾತೆ ಸಚಿವ ಪ್ರಕಾಶ್ ಜವಡೇಕರ್ ಮತ್ತು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ  ಗಿರಿರಾಜ್ ಸಿಂಗ್ ಅವರನ್ನು ಸಚಿವ ಸ್ಥಾನದಿಂದ ತೆರವುಗೊಳಿಸಿ ಈ ಸ್ಥಾನಗಳಿಗೆ ಉತ್ತರ ಪ್ರದೇಶದ ಬಿಜೆಪಿ ಮುಖಂಡರಿಗೆ ಸ್ಥಾನ ನೀಡಲು ಪ್ರಧಾನಿ ನರೇಂದ್ರ ಮೋದಿ ಆಲೋಚಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ರಾಜ್ಯಪಾಲರ ಬದಲಾವಣೆಗೂ ಪ್ರಧಾನಿ ಮೋದಿ ಸಿದ್ಧತೆ
ಇದೇ ವೇಳೆ 2019ರ ಲೋಕಸಭಾ ಚುನಾವಣೆಗೂ ಈಗಿನಿಂದಲೇ ಸಿದ್ಧತೆ ನಡೆಸಿರುವ ಬಿಜೆಪಿ ಪಕ್ಷ ವಿವಿಧ ರಾಜ್ಯಗಳ ರಾಜ್ಯಪಾಲರ ಪುನರ್ ನೇಮಕಕ್ಕೂ ಮುಂದಾಗಿದೆ ಎಂದು ತಿಳಿದುಬಂದಿದೆ.

2017ರ ಮೇ ತಿಂಗಳಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಕ್ಕೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು,  ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರೀಕೂಟವನ್ನು ಸೋಲಿಸಲು ಪ್ರಧಾನಿ ನರೇಂದ್ರ ಮೋದಿ ಈಗಿನಿಂದಲೇ ರಣತಂತ್ರ ರೂಪಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com