
ಶ್ರೀನಗರ: ನಿವೃತ್ತ ಸೈನಿಕರಿಗೆ ಮತ್ತು ನಿರಾಶ್ರಿತ ಕಾಶ್ಮೀರ ಪಂಡಿತರಿಗೆ ನಿವಾಸ ಕಲ್ಪಿಸಿ ಕೊಡುವ ಕಾಲೋನಿ ನಿರ್ಮಾಣ ಮಾಡುವ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ನಿರ್ಧಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಕೈ ಜೋಡಿಸಲು ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಸೈದ್ಧಾಂತಿಕವಾಗಿ ಪ್ರತ್ಯೇಕವಾಗಿದ್ದ ಕಾಶ್ಮೀರದ ಮೂವರು ಪ್ರತ್ಯೇಕತಾ ವಾದಿ ಮುಖಂಡರಾದ ಸೈಯ್ಯದ್ ಅಲಿ ಗಿಲಾನಿ, ಮೀರ್ವಾಜ್ ಉಮರ್ ಫಾರೂಖ್ ಮತ್ತು ಯಾಸೀನ್ ಮಲ್ಲಿಕ್ ಅವರು ಸೋಮವಾರ ಸಭೆ ಸೇರಿದ್ದು, ಸಭೆಯಲ್ಲಿ ಕಾಶ್ಮೀರಿ ಪಂಡಿತರಿಗೆ (ಹಿಂದೂ ಪಂಡಿತರು), ಸೈನಿಕರ ನಿವಾಸಕ್ಕಾಗಿ ಉದ್ದೇಶಿತ ಕಾಲೋನಿ ನಿರ್ಮಾಣಕ್ಕೆ ವಿರೋಧ್ಯ ವ್ಯಕ್ತಪಡಿಸುವ ಕುರಿತು ನಿರ್ಧಾರ ಕೈಗೊಂಡಿದ್ದಾರೆ. ಮೂಲಗಳ ಪ್ರಕಾರ ಪ್ರತ್ಯೇಕತಾ ವಾದಿ ಮುಖಂಡ ಸೈಯ್ಯದ್ ಅಲಿ ಗಿಲಾನಿ ಅವರ ಶ್ರೀನಗರ ನಿವಾಸದಲ್ಲಿ ಈ ಸಭೆ ನಡೆದಿದ್ದು, ಸುಮಾರು 90 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಸರ್ಕಾರದ ಕ್ರಮವನ್ನು ಒಕ್ಕೋರಲಿನಿಂದ ವಿರೋಧಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಈ ಸಭೆ ಬಗ್ಗೆ ಮಾತನಾಡಿರುವ ಹುರಿಯತ್ ಕಾನ್ಫರೆನ್ಸ್ ವರ್ಕಾರ ಅಯಾಜ್ ಅಕ್ಬರ್, 2008ರ ಬಳಿಕ ಇದೇ ಮೊದಲ ಬಾರಿಗೆ ಮೂವರು ಪ್ರತ್ಯೇಕತಾವಾದಿ ಮುಖಂಡರು ಸಭೆ ಸೇರಿದ್ದಾರೆ. ಸಭೆಯಲ್ಲಿ ಪ್ರಮುಖ ವಿಚಾರಗಳು ಕುರಿತ ಚರ್ಚಿಸಿದ್ದಾರೆ ಎಂದು ಹೇಳಿದರು. ಮೂಲಗಳ ಪ್ರಕಾರ ಇದೇ ಶುಕ್ರವಾರ ಕಾಶ್ಮೀರ ಬಂದ್ ಗೆ ಈ ಮೂವರು ನಾಯಕರು ಕರೆ ನೀಡಲಿದ್ದು, ಅಮರನಾಥ ಯಾತ್ರೆ ಬೋರ್ಡ್ ಗೆ ಭೂಮಿ ನೀಡುವ ಪಿಡಿಪಿ-ಬಿಜೆಪಿ ಸರ್ಕಾರದ ನಿರ್ಧಾರದ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ಮುಂದಾಗಿದ್ದಾರೆ. ಅಂತೆಯೇ ಕಾಶ್ಮೀರ ಪಂಡಿತರಿಗೆ ಭೂಮಿ ನೀಡುವ ಮತ್ತು ಸೈನಿಕ ಕಾಲೋನಿ ಸ್ಥಾಪಿಸುವ ನಿರ್ಧಾರವನ್ನು ಕೂಡ ವಿರೋಧಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
2008ರಲ್ಲಿ ನಾನಾ ಕಾರಣಗಳಿಂದ ಮತ್ತು ಸೈದ್ಧಾಂತಿಕ ವಿಚಾರಗಳಿಂದ ದೂರ-ದೂರವಾಗಿದ್ದ ಹುರಿಯತ್ ನಾಯಕರು ಇದೀಗ ಬಿಜೆಪಿ-ಪಿಡಿಪಿ ಸರ್ಕಾರವನ್ನು ಎದುರಿಸುವ ಸಲುವಾಗಿ ಕಾಶ್ಮೀರದಲ್ಲಿ ಮತ್ತೆ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.
Advertisement