
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಮತ್ತೆ ಮೇಘಸ್ಫೋಟ ಸಂಭವಿಸಿದ್ದು, ಶನಿವಾರ ದಿನವಿಡೀ ಸಂಭವಿಸಿದ ಭಾರಿ ಮಳೆಯಿಂದಾಗಿ ಸಾಕಷ್ಟು ರಸ್ತೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಉತ್ತರಾಖಂಡದೆ ಟೆಹ್ರಿ ಜಿಲ್ಲೆಯಲ್ಲಿ ನಿನ್ನೆ ಮೇಘಸ್ಫೋಟವಾಗಿದ್ದು, ಭಾರಿ ಮಳೆಯಿಂದಾಗಿ ಪವಿತ್ರ ಸ್ಥಳಗಳಾದ ಗಂಗೋತ್ರಿ-ಕೇದಾರನಾಥ ದೇಗುಲಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯೇ ನೀರಿನಲ್ಲಿ ಕೊಚ್ಚಿ ಹೋಗಿದೆ. ಸ್ಥಳೀಯರು ನೀಡಿರುವ ಮಾಹಿತಿಯಂತೆ ಘನ್ಸಾಲಿ ಎಂಬ ಪ್ರದೇಶದಲ್ಲಿ ಮಳೆ ನೀರಿನ ರಭಸಕ್ಕೆ ಒಂದು ಶಾಲೆ ಮತ್ತು ಪಕ್ಕದಲ್ಲಿಯೇ ಇದ್ದ ಒಂದು ಮನೆ ಕೊಚ್ಚಿಕೊಂಡು ಹೋಗಿದೆಯಂತೆ. ಇಷ್ಟು ಮಾತ್ರವಲ್ಲದೆ ಘನ್ಸಾಲಿ ಹಳ್ಳಿಯ ಬಹುತೇಕ ಭಾಗಗಳು ಹಾನಿಗೊಳಗಾಗಿದೆ. ಹೀಗಾಗಿ ಇಲ್ಲಿನ ಸ್ಥಳೀಯರು ಇದೀಗ ಸೂರಿಲ್ಲದೆ ನಿರಾಶ್ರಿತರಾಗಿದ್ದು, ಅವರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸುವ ಕಾರ್ಯ ಆರಂಭವಾಗಿದೆ.
ಆದರೆ ಈ ವರೆಗೂ ಸಾವಿಗೀಡಾದವರ ಅಥವಾ ಮಳೆಯಿಂದಾಗಿ ಹಾನಿಗೊಳಗಾದವರ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. ಕೊಟಿಯಾರಾ ಹಾಗೂ ಸೀತಾಪುರ ಪ್ರದೇಶಗಳಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಆದರೆ ಆಸ್ತಿ ಹಾನಿಯ ನಿಖರ ಮೊತ್ತ ತಿಳಿದುಬಂದಿಲ್ಲ. ಸದ್ಯ ಮಳೆ ನಿಂತಿದ್ದು, ರಕ್ಷಣಾ ಕಾರ‍್ಯಾಚರಣೆಗೆ ಉತ್ತರಾಖಂಡ ಸರ್ಕಾರ ಆದೇಶಿಸಿದೆ. ಈ ಭಾಗದಲ್ಲಿ ಜೂನ್ ವೇಳೆ ಮೇಘಸ್ಫೋಟ ಸಾಮಾನ್ಯವಾಗಿದ್ದರೂ, ಬೇಸಿಗೆ ಕಾಲದಲ್ಲಿ ಈ ಅಪಾಯವಿರುವುದಿಲ್ಲ.
ಕಳೆದ ಫೆಬ್ರವರಿಯಲ್ಲಿ ಇದೇ ಉತ್ತರಾಖಂಡದಲ್ಲಿ ಭೀಕರ ಕಾಡ್ಗಿಚ್ಚು ಹಬ್ಬಿತ್ತು. ಇಡೀ ರಾಜ್ಯದ ಸುಮಾರು 4048 ಹೆಕ್ಟೇರ್ ಅರಣ್ಯ ಸಂಪತ್ತಿಗೆ ಹಾನಿ ಮಾಡಿದ್ದ ಕಾಡ್ಗಿಚ್ಚು ಇತ್ತೀಚೆಗಷ್ಟೇ ಶಮನವಾಗಿತ್ತು. ಇದರ ಬೆನ್ನಲ್ಲೇ ಇದೀಗ ಮೇಘ ಸ್ಫೋಟ ಸಂಭವಿಸಿದ್ದು, ಮತ್ತೆ 2013 ಭೀಕರ ಪ್ರವಾಹ ಪರಿಸ್ಥಿತಿಯನ್ನು ನೆನಪಿಸುತ್ತಿದೆ.
ಗಂಗೋತ್ರಿ-ಕೇದಾರನಾಥ ಯಾತ್ರೆ ಸ್ಥಗಿತ
ಇನ್ನು ಪವಿತ್ರ ಯಾತ್ರಾ ಸ್ಥಳಗಳಾದ ಗಂಗೋತ್ರಿ ಮತ್ತು ಕೇದಾರನಾಥ ದೇಗುಲಗಳ ಯಾತ್ರೆ ಕೂಡ ಭಾರಿ ಮಳೆಯಿಂದಾಗಿ ಸ್ಥಗಿತಗೊಂಡಿದೆ. ಈ ಎರಡೂ ಯಾತ್ರಾಸ್ಥಳಗನ್ನು ಸಂಪರ್ಕಿಸು ಪ್ರಮುಖ ರಸ್ತೆ ಘನ್ಸಾಲ್ ಗ್ರಾಮದಲ್ಲಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣ ಸಿಬ್ಬಂದಿಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದ್ದು, ಯಾವುದೇ ಕ್ಷಣದಲ್ಲೂ ಕಾರ್ಯಾಚರಣೆಗೆ ಸಿದ್ಧರಿರುವಂತೆ ಸೂಚನೆ ನೀಡಲಾಗಿದೆ.
Advertisement