ಉದ್ಯೋಗ ಭರವಸೆ ಹಿಂಪಡೆದ ಎಲ್ & ಟಿ ಇನ್ಫೋಟೆಕ್ : ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ, ಭುಗಿಲೆದ್ದ ಪ್ರತಿಭಟನೆ

2014 ರಲ್ಲಿ ನಡೆದಿದ್ದ ಕ್ಯಾಂಪಸ್ ನೇಮಕಾತಿಯಲ್ಲಿ ಆಯ್ಕೆಗೊಂಡಿದ್ದ ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗ ಭರವಸೆ ನೀಡಿದ್ದ ಎಲ್& ಟಿ ಇನ್ಫೋಟೆಕ್ ಈಗ ಏಕಾ ಏಕಿ ಉದ್ಯೋಗ ಭರವಸೆಯನ್ನು ಹಿಂಪಡೆದಿದೆ
ಪ್ರತಿಭಟನೆ
ಪ್ರತಿಭಟನೆ

ಚೆನ್ನೈ: 2014 ರಲ್ಲಿ ನಡೆದಿದ್ದ ಕ್ಯಾಂಪಸ್ ನೇಮಕಾತಿಯಲ್ಲಿ ಆಯ್ಕೆಗೊಂಡಿದ್ದ ಸಾವಿರ ವಿದ್ಯಾರ್ಥಿಗಳಿಗೆ ಉದ್ಯೋಗ ಭರವಸೆ ನೀಡಿದ್ದ ಎಲ್& ಟಿ ಇನ್ಫೋಟೆಕ್ ಈಗ ಏಕಾಏಕಿ ಉದ್ಯೋಗ ಭರವಸೆಯನ್ನು ಹಿಂಪಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಚೆನ್ನೈ ನ ಐಟಿ ಹಬ್ ಆಗಿರುವ ಹಳೆ ಮಹಾಬಲಿಪುರಂ ರಸ್ತೆಯಲ್ಲಿರುವ ಎಲ್ & ಟಿ ಇನ್ಫೋಟೆಕ್ ಸಂಸ್ಥೆಯ ಎದುರು ಸುಮಾರು 30 -40 ಯುವಕ, ಯುವತಿಯರು ಪ್ರತಿಭಟನೆ ನಡೆಸಿದ್ದು, ಎಲ್&ಟಿ ಉದ್ಯೋಗ ಭರವಸೆ ಹಿಂಪಡೆದಿದ್ದು, ಉದ್ಯೋಗಕ್ಕಾಗಿ ಕಾಯುತ್ತಿದ್ದ ನಮಗೆ ಒಂದೂ ವರೆ ವರ್ಷ ವ್ಯರ್ಥವಾಗಿದೆ ಎಂದು ಆರೋಪಿಸಿದ್ದಾರೆ.
ಕ್ಯಾಂಪಸ್ ನೇಮಕಾತಿಯಲ್ಲಿ ಆಯ್ಕೆಗೊಂಡವರಿಗೆ ಉದ್ಯೋಗ ನೀಡುವುದಾಗಿ ಸತತ 18 ತಿಂಗಳ ಕಾಲ ಕಾರ್ಪೊರೇಟ್ ದೈತ್ಯ ಎಲ್&ಟಿ ಭರವಸೆ ನೀಡಿತ್ತು. ಆದರೆ ಈಗ ಏಕಾಏಕಿ 1,000 ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಉದ್ಯೋಗ ಭರವಸೆಗಳನ್ನು ಹಿಂಪಡೆಯಲಾಗಿದೆ ಎಂದು ಕಂಪನಿ ವಿರುದ್ಧ ಒಂದು ದಿನದ ಉಪವಾಸ ಪ್ರತಿಭಟನೆ ಕೈಗೊಂಡ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇನ್ನು ಬೇರೆ ಸಂಸ್ಥೆಗಳು  ಈಗಷ್ಟೇ ಮುಕ್ತಾಯಗೊಂದಿರುವ ಶೈಕ್ಷಣಿಕ ಸಾಲಿನಲ್ಲಿ ಉತ್ತೀರ್ಣರಾದವರಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ಪದವಿ ಪೂರೈಸಿ 18 ತಿಂಗಳು ಕಳೆದಿರುವುದರಿಂದ ಬೇರೆಯ ಉದ್ಯೋಗಗಳು ಸಿಗುವುದೂ ಕಷ್ಟವಾಗಿದ್ದು ಎಲ್&ಟಿ ಯನ್ನು ನಂಬಿ ಭವಿಷ್ಯ ಹಾಳಾಯಿತು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಪ್ರತಿಭಟನಾ ನಿರತರ ಆರೋಪಕ್ಕೆ ಅಧಿಕೃತವಾಗಿ ಪ್ರತಿಕ್ರಿಯೆ ನೀಡಲು ಎಲ್&ಟಿ ನಿರಾಕರಿಸಿದೆ. ಆದರೆ ಕಂಪನಿ ಮೂಲಗಳ ಪ್ರಕಾರ ಕ್ಯಾಂಪಸ್ ನೇಮಕಾತಿಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ಅನುತ್ತೀರಣರಾದವರಿಗೆ ಉದ್ಯೋಗ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಪ್ರತಿಭಟನಾ ನಿರತರು ಮಾತ್ರ ಕಂಪನಿಯ ಸಮರ್ಥನೆಗೆ ವ್ಯತಿರಿಕ್ತವಾದ ಹೇಳಿಕೆ ನೀಡುತ್ತಿದ್ದು, ಕ್ಯಾಂಪಸ್ ನೇಮಕಾತಿಯಲ್ಲಿ ಆಯ್ಕೆಗೊಂಡು ನೇಮಕಾತಿ ಪತ್ರ ಪಡೆದ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಉದ್ಯೋಗದಿಂದ ಕೈಬಿಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com