ದಂಡ ಕಟ್ಟಿ ಇಲ್ಲ ಕ್ರಮ ಎದುರಿಸಿ; ಶ್ರೀ ಶ್ರೀ ರವಿಶಂಕರ್‌ ಗೆ ಹಸಿರು ನ್ಯಾಯಾಧಿಕರಣದ ಖಡಕ್ ಎಚ್ಚರಿಕೆ

ಶ್ರೀ ಶ್ರೀ ರವಿಶಂಕರ್‌ ಗುರೂಜಿ ನೇತೃತ್ವದ "ಆರ್ಟ್‌ ಆಫ್ ಲಿವಿಂಗ್‌ ಫೌಂಡೇಶನ್‌"ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಂಗಳವಾರ ಖಡಕ್ ಎಚ್ಚರಿಕೆ ನೀಡಿದ್ದು, "ವಿಶ್ವ ಸಾಂಸ್ಕೃತಿಕ ಉತ್ಸವ'' ಹಿನ್ನಲೆಯಲ್ಲಿ ನ್ಯಾಯಾಧಿಕರಣ ನೀಡಿದ್ದ ದಂಡವನ್ನು ಕೂಡಲೇ ಪಾವತಿ ಮಾಡುವಂತೆ ಆದೇಶಿಸಿದೆ.
ಹಸಿರು ನ್ಯಾಯಾಧಿಕರಣ ಮತ್ತು ರವಿ ಶಂಕರ್ ಗುರೂಜಿ (ಸಂಗ್ರಹ ಚಿತ್ರ)
ಹಸಿರು ನ್ಯಾಯಾಧಿಕರಣ ಮತ್ತು ರವಿ ಶಂಕರ್ ಗುರೂಜಿ (ಸಂಗ್ರಹ ಚಿತ್ರ)

ನವದೆಹಲಿ: ಶ್ರೀ ಶ್ರೀ ರವಿಶಂಕರ್‌ ಗುರೂಜಿ ನೇತೃತ್ವದ "ಆರ್ಟ್‌ ಆಫ್ ಲಿವಿಂಗ್‌ ಫೌಂಡೇಶನ್‌"ಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮಂಗಳವಾರ ಖಡಕ್ ಎಚ್ಚರಿಕೆ ನೀಡಿದ್ದು, "ವಿಶ್ವ  ಸಾಂಸ್ಕೃತಿಕ ಉತ್ಸವ'' ಹಿನ್ನಲೆಯಲ್ಲಿ ನ್ಯಾಯಾಧಿಕರಣ ನೀಡಿದ್ದ ದಂಡವನ್ನು ಕೂಡಲೇ ಪಾವತಿ ಮಾಡುವಂತೆ ಆದೇಶಿಸಿದೆ.

"ವಿಶ್ವ ಸಾಂಸ್ಕೃತಿಕ ಉತ್ಸವ" ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಂಸ್ಥಾಪಕ ರವಿಶಂಕರ್ ಗುರೂಜಿ ಅವರನ್ನು ತೀವ್ರ  ತರಾಟೆಗೆ ತೆಗೆದುಕೊಂಡಿದ್ದು, ಉತ್ಸವ ಸಂಬಂಧ ವಿಧಿಸಲಾಗಿದ್ದ ದಂಡವನ್ನು ಕೂಡಲೇ ಕಟ್ಟಿ ಇಲ್ಲವಾದಲ್ಲಿ ಮುಂದಿನ ಕ್ರಮ ಎದುರಿಸಿ ಎಂದು ಖಡಕ್ ಎಚ್ಚರಿಕೆ ನೀಡಿದೆ. ಪ್ರಕರಣ ಸಂಬಂಧ  ಇಂದು ವಿಚಾರಣೆ ನಡೆಸಿದ ಹಸಿರು ನ್ಯಾಯಾಧಿಕರಣ, ನ್ಯಾಯಾಧಿಕರಣದ ಅನುಮತಿ ಮೇರೆಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಉತ್ಸವ ಆಯೋಜನೆ ಮಾಡಿತ್ತು. ಇದೀಗ ಅದು ಈ ಹಿಂದೆ ನೀಡಿದ್ದ  ಮಾತಿನಂತೆ ಬಾಕಿ ಉಳಿಸಿಕೊಂಡಿರುವ ದಂಡದ ಮೊತ್ತವನ್ನು ಈ ಕೂಡಲೇ ಪಾವತಿ ಮಾಡಬೇಕು ಎಂದು ಹೇಳಿದೆ.

ಯಮುನಾದ ನದಿ ತಟದ ಸುಮಾರು 7 ಎಕರೆಯ ವಿಸ್ತಾರವಾದ ಪ್ರದೇಶದಲ್ಲಿ ಸಾಂಸ್ಕೃತಿಕ ಉತ್ಸವಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿತ್ತು.ಇದರಿಂದ ಇಲ್ಲಿನ ಅತಿ ಸೂಕ್ಷ್ಮ ಜೈವಿಕ  ಪರಿಸರ ಹಾನಿಗೊಳಗಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದ ಹಸಿರು ನ್ಯಾಯಾಧಿಕರಣ ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ 5 ಕೋಟಿ ದಂಡ ವಿಧಿಸಿತ್ತು. ಆರಂಭದಲ್ಲಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ  ಸಂಸ್ಥೆ ಬಳಿಕ ಉತ್ಸವ ಆರಂಭಕ್ಕೂ ಮುನ್ನ 25 ಲಕ್ಷ ನೀಡಿ ಉಳಿದ ಹಣವನ್ನು ಉತ್ಸವದ ಬಳಿಕ ಪಾವತಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ಉತ್ಸವ ಮುಕ್ತಾಯವಾಗಿ ತಿಂಗಳುಗಳೇ  ಕಳೆದರೂ ಈ ವರೆಗೂ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮಾತ್ರ ಬಾಕಿ ಉಳಿದಿರುವ 4.75 ಕೋಟಿ ಹಣವನ್ನು ಪಾವತಿ ಮಾಡಿಲ್ಲ. ಈ ಹಿನಲ್ಲೆಯಲ್ಲಿ ನ್ಯಾಯಾಲಯದಲ್ಲಿ ಸತತ ವಿಚಾರಣೆ  ನಡೆಯುತ್ತಿದ್ದು, ಈ ಹಿಂದೆ ನ್ಯಾಯಾಧಿಕರಣ ಶ್ರೀ ಶ್ರೀ ವಿರುದ್ಧ ನ್ಯಾಯಾಂಗ ನಿಂಧನೆಗೂ ಮುಂದಾಗಿತ್ತು.

ಆದರೆ ಹಸಿರು ನ್ಯಾಯಾಧಿಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆ, ನಾವು ಉತ್ಸವ ಆರಂಭಿಸುವ ಮೊದಲು ಅಲ್ಲಿನ ಜೈವಿಕ ಪರಿಸರ ಹೇಗಿತ್ತೋ  ಅದಕ್ಕಿಂತಲೂ ಉತ್ತಮವಾದ ಜೈವಿಕ ಪರಿಸರವನ್ನು ನಾವು ನಿರ್ಮಾಣ ಮಾಡಿದ್ದೇವೆ. ಹೀಗಿದ್ದೂ ದಂಡ ಪಾವತಿ ಏಕೆ ಎಂದು ಸಂಸ್ಥೆ ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್  ನಲ್ಲಿ ವಿಚಾರಣೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಶ್ರೀ ಶ್ರೀ ವಿರುದ್ಧ ನ್ಯಾಯಾಧಿಕರಣ ನೀಡಿರುವ ತೀರ್ಪು ಕುತೂಹಲ ಕೆರಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com